ಗುಜರಾತ್ | ವಿವಾಹಿತ ಮಹಿಳೆಯೊಂದಿಗೆ ಸಂಬಂಧ, ದಲಿತ ಯುವಕನನ್ನು ಥಳಿಸಿ ಬೆತ್ತಲೆ ಮೆರವಣಿಗೆ

ಸಾಂದರ್ಭಿಕ ಚಿತ್ರ
ಹಿಮ್ಮತ್ನಗರ: ವಿವಾಹಿತ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ ಆರೋಪದಲ್ಲಿ ಆಕೆಯ ಪತಿ ಮತ್ತು ಸಂಬಂಧಿಗಳು ಸೇರಿಕೊಂಡು ದಲಿತ ಯುವಕನೋರ್ವನನ್ನು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಸಬರಕಾಂತಾ ಜಿಲ್ಲೆಯ ಇದರ್ ಪಟ್ಟಣದ ಸಮೀಪದ ಗ್ರಾಮದಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಮಾ.11ರಂದು ರಾತ್ರಿ ನಡೆದಿದ್ದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಯುವಕನನ್ನು ಬೆತ್ತಲೆಯಾಗಿ ನಡೆಸಿದ್ದ ಗುಂಪು ಆತನಿಗೆ ಕಿರುಕುಳ ನೀಡುತ್ತಿದ್ದ ಮತ್ತು ಹಲ್ಲೆ ನಡೆಸುತ್ತಿದ್ದ ದೃಶ್ಯ ವೀಡಿಯೊದಲ್ಲಿ ಕಂಡು ಬಂದಿದೆ.
ವೈರಲ್ ವೀಡಿಯೊವನ್ನು ಆಧರಿಸಿ ಮಹಿಳೆಯ ಪತಿ ಮತ್ತು ಇತರ ಸಂಬಂಧಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಯವಕನನ್ನು ಇದರ್ ಪಟ್ಟಣದಲ್ಲಿಯ ಆತನ ಮನೆಯಿಂದ ಅಪಹರಿಸಿ ಥಳಿಸಲಾಗಿದೆ ಮತ್ತು ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಕ್ಷಮೆಯಾಚನೆ ಪತ್ರಕ್ಕೆ ಸಹಿ ಹಾಕಿದ ಬಳಿಕವೇ ಗುಂಪು ಆತನನ್ನು ಬಿಟ್ಟಿತ್ತು ಎಂದು ಸಬರಕಾಂತಾ ಎಸ್ಪಿ ವಿಜಯ ಪಟೇಲ್ ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಬುಧವಾರ ವೀಡಿಯೊ ವೈರಲ್ ಆದ ಬಳಿಕ ನಾವು ಸಂತ್ರಸ್ತ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಗುರುವಾರ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸು ಬಂದಿದೆ.