ದೋಷಮುಕ್ತಿ ಕೋರಿ ತೀಸ್ತಾ ಸೆಟಲ್ವಾಡ್ ಸಲ್ಲಿಸಿದ ಅರ್ಜಿಗೆ ಗುಜರಾತ್ ಸರಕಾರ ವಿರೋಧ
Photo: PTI
ಹೊಸದಿಲ್ಲಿ: 2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಸುಳ್ಳು ಸಾಕ್ಷಗಳನ್ನು ಸೃಷ್ಟಿಸಿದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸಟಲ್ವಾಡ್ ಅವರು ದೋಷಮುಕ್ತಿ ಕೋರಿ ಸಲ್ಲಿಸಿದ ಅರ್ಜಿಗೆ ಗುಜರಾತ್ ಸರಕಾರ ವಿರೋಧ ವ್ಯಕ್ತಪಡಿಸಿದೆ. ಈಗ ತೀಸ್ತಾ ಸೆಟಲ್ವಾಡ್ ಅವರು ಜೈಲಿನಲ್ಲಿ ಇಲ್ಲ. ಗುಜರಾತ್ ಉಚ್ಚ ನ್ಯಾಯಾಲಯ ಪೊಲೀಸರ ಮುಂದೆ ಕೂಡಲೇ ಶರಣಾಗುವಂತೆ ಶನಿವಾರ ತೀಸ್ತಾ ಸಟಲ್ವಾಡ್ ಅವರಿಗೆ ಸೂಚಿಸಿತ್ತು.
ಆದರೆ, ಅನಂತರ ತಡ ರಾತ್ರಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಂದು ವಾರ ತಡೆ ನೀಡಿತ್ತು. ತೀಸ್ತಾ ಸಟಲ್ವಾಡ್ ಅವರು 2002ರ ಗುಜರಾತ್ ಹತ್ಯಾಕಾಂಡದ ಸಂತ್ರಸ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಹಾಗೂ ಅಮಾಯಕ ವ್ಯಕ್ತಿಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಗುಜರಾತ್ ಸರಕಾರ ಸೋಮವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಂಬಾಲಾಲ್ ಪಟೇಲ್ ಅವರಿಗೆ ತಿಳಿಸಿತ್ತು.
ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಸೇರಿದಂತೆ ಅಮಾಯಕ ವ್ಯಕ್ತಿಗಳನ್ನು 2002ರ ಗುಜರಾತ್ ಹತ್ಯಾಕಾಂಡದಲ್ಲಿ ಸಿಲುಕಿಸಲು ಅವರ ಹೆಸರನ್ನು ಅಫಿಡಾವಿಟ್ನಲ್ಲಿ ತೀಸ್ತಾ ಸೆಟಲ್ವಾಡ್ ಉಲ್ಲೇಖಿಸಿದ್ದಾರೆ ಎಂದು ಗುಜರಾತ್ ಸರಕಾರದ ಅಫಿಡಾವಿಟ್ ಹೇಳಿದೆ. ಗುಜರಾತ್ನ ಮಾಜಿ ಡಿಜಿಪಿ ಆರ್.ಬಿ. ಶ್ರೀಕುಮಾರ್, ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರೊಂದಿಗೆ ತೀಸ್ತಾ ಸೆಟಲ್ವಾಡ್ ಅವರು ಕೂಡ ಈ ಪ್ರಕರಣದ ಆರೋಪಿ. ಈ ಹಿಂದೆ ಶ್ರೀಕುಮಾರ್ ಅವರು ದೋಷಮುಕ್ತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.