ಪ್ರಧಾನಿ ಮೋದಿ ಡಿಗ್ರಿ ಪ್ರಕರಣ | ಪ್ರತ್ಯೇಕ ವಿಚಾರಣೆಗೆ ಆಪ್ ನಾಯಕರ ಅರ್ಜಿ ತಿರಸ್ಕಾರ

ಅರವಿಂದ ಕೇಜ್ರಿವಾಲ್ , ನರೇಂದ್ರ ಮೋದಿ | Photo Credit : PTI
ಅಹಮದಾಬಾದ್, ಜ.13: ಗುಜರಾತ್ ವಿಶ್ವವಿದ್ಯಾಲಯ ಮಾನನಷ್ಟ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆಪ್ ನಾಯಕರಾದ ಅರವಿಂದ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಗಳನ್ನು ಗುಜರಾತ್ ಉಚ್ಚ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.
ಪ್ರಕರಣವು ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತು ಈ ನಾಯಕರ 2023ರ ಹೇಳಿಕೆಗಳಿಗೆ ಸಂಬಂಧಿಸಿದ್ದು, ಹೈಕೋರ್ಟ್ ತೀರ್ಪು ಅವರ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಮಾರ್ಗವನ್ನು ಸುಗಮಗೊಳಿಸಿದೆ.
ಕೆಳ ನ್ಯಾಯಾಲಯದ ಆದೇಶಗಳನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ಎಂ.ಆರ್. ಮೆಂಗ್ಡೆ, ಪ್ರತ್ಯೇಕ ವಿಚಾರಣೆಗಳನ್ನು ಕೋರಿದ್ದ ಕೇಜ್ರಿವಾಲ್ ಮತ್ತು ಸಿಂಗ್ ಅವರ ಅರ್ಜಿಗಳನ್ನು ತಿರಸ್ಕರಿಸಿದರು.
ಕೇಜ್ರಿವಾಲ್ ಮತ್ತು ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ಮೋದಿ ಅವರ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಪ್ರಶ್ನಿಸಿ ತೀಕ್ಷ್ಣ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ ಬಳಿಕ, ಏಪ್ರಿಲ್ 2023ರಲ್ಲಿ ಗುಜರಾತ್ ವಿಶ್ವವಿದ್ಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿತ್ತು. ಅವರ ಹೇಳಿಕೆಗಳು ಅತ್ಯಂತ ಅವಮಾನಕಾರಿಯಾಗಿದ್ದು, ಸಂಸ್ಥೆಯ ದೀರ್ಘಕಾಲದ ಶೈಕ್ಷಣಿಕ ಖ್ಯಾತಿಗೆ ಗಂಭೀರ ಹಾನಿಯನ್ನುಂಟು ಮಾಡಿವೆ ಎಂದು ವಿವಿ ಆರೋಪಿಸಿದೆ.





