ವಿಚಾರಣೆಗೆ ಶೌಚಾಲಯದಿಂದ ಹಾಜರಾದ ವ್ಯಕ್ತಿಗೆ 1 ಲಕ್ಷ ರೂ. ದಂಡ: ಗುಜರಾತ್ ಹೈಕೋರ್ಟ್ ನಿಂದ ತೀವ್ರ ಅಸಮಾಧಾನ

Photo credit: bhaskarenglish.in
ಅಹಮದಾಬಾದ್: ವರ್ಚುವಲ್ ಕೋರ್ಟ್ ವಿಚಾರಣೆಗೆ ವೀಡಿಯೊ ಮೂಲಕ ಶೌಚಾಲಯದಿಂದಲೇ ಲಾಗಿನ್ ಆಗಿ ನ್ಯಾಯಾಲಯಕ್ಕೆ ಅಗೌರವ ತೋರಿದ ವ್ಯಕ್ತಿಗೆ, ಗುಜರಾತ್ ಹೈಕೋರ್ಟ್ ಸೋಮವಾರ 1 ಲಕ್ಷ ರೂ. ದಂಡ ವಿಧಿಸಿ, ಕಠಿಣ ಎಚ್ಚರಿಕೆ ನೀಡಿದೆ.
ಸಮದ್ ಅಬ್ದುಲ್ ರೆಹಮಾನ್ ಶಾ ಎಂಬವರು ಕಳೆದ ತಿಂಗಳು ನಡೆದ ವರ್ಚುವಲ್ ವಿಚಾರಣೆಯ ವೇಳೆ ಶೌಚಾಲಯದ ಆಸನದಲ್ಲಿ ಕುಳಿತು ಲೈವ್ ಕ್ಯಾಮೆರಾ ಆನ್ ಮಾಡಿ ಹೈ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು. ಇದೇ ವೇಳೆ ಅವರು 'ಸ್ವಚ್ಛ'ಗೊಳಿಸಿಕೊಳ್ಳುತ್ತಿರುವ ದೃಶ್ಯವೂ ವೈರಲ್ ಆಗಿತ್ತು. ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ನ್ಯಾಯಮೂರ್ತಿಗಳಾದ ಎ.ಎಸ್. ಸುಪೆಹಿಯಾ ಮತ್ತು ಆರ್.ಟಿ. ವಚ್ಛಾನಿ ಅವರಿದ್ದ ವಿಭಾಗೀಯ ಪೀಠವು, ರೆಹಮಾನ್ ಶಾ ಅವರ ನಡವಳಿಕೆಯನ್ನು "ಅಶ್ಲೀಲ ಮತ್ತು ನ್ಯಾಯಾಲಯದ ಗೌರವಕ್ಕೆ ದಕ್ಕೆ ತರುವಂತಿತ್ತು" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ಲೈವ್ ಸ್ಟ್ರೀಮಿಂಗ್ ಪ್ರಕ್ರಿಯೆಯ ವೇಳೆ ಈ ವ್ಯಕ್ತಿಯ ವರ್ತನೆ ಅಶ್ಲೀಲವಾಗಿದ್ದು, ನ್ಯಾಯಾಂಗ ಪ್ರಕ್ರಿಯೆಗೆ ಅಪಮಾನವಾಗಿದೆ. ಹೀಗಾಗಿ ಅವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುವುದು", ಎಂದು ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಸೂಚನೆ ನೀಡುವ ಮೊದಲು, ಹೈಕೋರ್ಟ್ ರಿಜಿಸ್ಟ್ರಾರ್ (ಮಾಹಿತಿ ಮತ್ತು ತಂತ್ರಜ್ಞಾನ) ಈ ಕುರಿತು ಯಾವುದೇ ಪ್ರತಿಕ್ರಿಯೆ ಸಲ್ಲಿಸದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಈ ರೀತಿಯ ಘಟನೆಗಳನ್ನು ತಡೆಗಟ್ಟಲು ಕ್ರಮಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ರೆಹಮಾನ್ ಶಾ ಅವರು, ತಮ್ಮ ವಿರುದ್ಧ ದಾಖಲಾದ ಪ್ರಥಮ ಮಾಹಿತಿ ವರದಿ (FIR) ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಎರಡು ಪಕ್ಷಗಳ ಸಹಮತಿಯ ಮೇರೆಗೆ FIR ರದ್ದುಪಡಿಸಿದರೂ, ಅವರ ನಡವಳಿಕೆಗೆ ನ್ಯಾಯಾಲಯ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಜೂ. 20 ರಂದು ಸಮದ್ ಬ್ಯಾಟರಿ ಎಂಬ ಹೆಸರಿನಿಂದ ಹೈಕೋರ್ಟ್ ಕಲಾಪಕ್ಕೆ ಟಾಯ್ಲೆಟ್ ನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಲಾಗಿನ್ ಆಗಿದ್ದ ಸಮದ್ ಅಬ್ದುಲ್ ರೆಹಮಾನ್ ಶಾ ವರ್ತನೆಯು ತೀವ್ರ ಟೀಕೆ ಗುರಿಯಾಗಿತ್ತು. ಆ ಬಳಿಕ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.







