ಗುಜರಾತ್ ಭೂಮಿ ಹಂಚಿಕೆ ಪ್ರಕರಣ |ಮಾಜಿ ಐಎಎಸ್ ಅಧಿಕಾರಿ ಪ್ರದೀಪ ಶರ್ಮಾ, ಇತರ ಮೂವರಿಗೆ ಐದು ವರ್ಷಗಳ ಕಠಿಣ ಶಿಕ್ಷೆ

ಸಾಂದರ್ಭಿಕ ಚಿತ್ರ | PC : PTI
ಭುಜ್ : ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ಖಾಸಗಿ ಕಂಪೆನಿ ಸಾ ಪೈಪ್ಸ್ ಪ್ರೈ.ಲಿ.ಗೆ ಸರಕಾರಿ ಭೂಮಿಯ ಹಂಚಿಕೆಯಲ್ಲಿ ಅವ್ಯವಹಾರಗಳಿಗೆ ಸಂಬಂಧಿಸಿದ 2011ರ ಪ್ರಕರಣದಲ್ಲಿ ಗುಜರಾತಿನ ಕಛ್ ಜಿಲ್ಲೆಯ ಬುಜ್ ನ ನ್ಯಾಯಾಲಯವು ಶನಿವಾರ ಮಾಜಿ ಐಎಎಸ್ ಅಧಿಕಾರಿ ಪ್ರದೀಪ ಶರ್ಮಾಗೆ ಐದು ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿದೆ. ಆಗ ಶರ್ಮಾ ಜಿಲ್ಲಾಧಿಕಾರಿಯಾಗಿದ್ದರು.
ನ್ಯಾಯಾಲಯವು ಶರ್ಮಾ ಜೊತೆಗೆ ಇತರ ಆರೋಪಿಗಳಾದ ನಗರ ಯೋಜಕ ನಾತುಭಾಯಿ ದೇಸಾಯಿ, ಆಗಿನ ತಹಶೀಲ್ದಾರ ನರೇಂದ್ರ ಪ್ರಜಾಪತಿ ಮತ್ತು ಆಗಿನ ಸ್ಥಾನೀಯ ಉಪ ವಿಭಾಗಾಧಿಕಾರಿ ಅಜಿತಸಿನ್ಹ ಝಲಾ ಅವರಿಗೂ ಐದು ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ 10,000 ರೂ.ಗಳ ದಂಡವನ್ನು ವಿಧಿಸಿದೆ.
2004ರ ಭ್ರಷ್ಟಾಚಾರ ಪ್ರಕರಣದಲ್ಲಿ ಅಹ್ಮದಾಬಾದ್ ನ ಸೆಷನ್ಸ್ ನ್ಯಾಯಾಲಯವು ಈ ವರ್ಷದ ಜ.20ರಂದು ವಿಧಿಸಿರುವ ಐದು ವರ್ಷಗಳ ಜೈಲು ಶಿಕ್ಷೆಯನ್ನು ಶರ್ಮಾ ಅನುಭವಿಸಿದ ಬಳಿಕ ಇಂದು ವಿಧಿಸಲಾಗಿರುವ ಜೈಲುಶಿಕ್ಷೆಯು ಆರಂಭಗೊಳ್ಳುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾರನ್ನು 2011, ಮಾ.4ರಂದು ಬಂಧಿಸಲಾಗಿತ್ತು.





