‘ಸೈಬರ್ ಗುಲಾಮಗಿರಿ’ ಜಾಲದ ರೂವಾರಿಯನ್ನು ಬಂಧಿಸಿದ ಗುಜರಾತ್ ಪೊಲೀಸರು

Photo Credit: deccanherald
ಅಹ್ಮದಾಬಾದ್: ಅಂತರರಾಷ್ಟ್ರೀಯ ‘ಸೈಬರ್ ಗುಲಾಮಗಿರಿ’ ಜಾಲದ ರೂವಾರಿಯನ್ನು ಬಂಧಿಸಿರುವುದಾಗಿ ಗುಜರಾತ್ ಪೋಲಿಸರು ಪ್ರಕಟಿಸಿದ್ದಾರೆ. ಈ ಜಾಲವು ಭಾರತೀಯ ಯುವಕರನ್ನು ಉದ್ಯೋಗದ ನೆಪದಲ್ಲಿ ದಕ್ಷಿಣ ಏಶ್ಯಾ ರಾಷ್ಟ್ರಗಳಿಗೆ ಕಳುಹಿಸುತ್ತಿತ್ತು ಮತ್ತು ನಂತರ ಅವರನ್ನು ಒತ್ತೆಯಾಳುಗಳನ್ನಾಗಿಸಿ ‘ಸೈಬರ್ ಗುಲಾಮ’ರನ್ನಾಗಿಸಿಕೊಂಡು ಸೈಬರ್ ಅಪರಾಧಗಳನ್ನು ಮಾಡಿಸುತ್ತಿತ್ತು.
ಮ್ಯಾನ್ಮಾರ್ನ ಕೆಕೆ ಪಾರ್ಕ್ ಮತ್ತು ಕಾಂಬೋಡಿಯಾದಲ್ಲಿ ಚೀನಿ ಸೈಬರ್ ಮಾಫಿಯಾ ನಡೆಸುತ್ತಿರುವ ವಂಚನೆ ಕೇಂದ್ರಗಳಿಗೆ ಭಾರತೀಯ ಯುವಕರನ್ನು ಪೂರೈಸುತ್ತಿದ್ದ ಪ್ರಮುಖ ಏಜೆಂಟ್ ಎನ್ನಲಾಗಿರುವ ನಿಲೇಶ್ ಅಲಿಯಾಸ್ ನೀಲ್ ಪುರೋಹಿತ್ನನ್ನು ಮಲೇಷ್ಯಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಗಾಂಧಿನಗರದಲ್ಲಿ ಸಿಐಡಿ ಕ್ರೈಂ ಬ್ರ್ಯಾಂಚ್ನ ಸೈಬರ್ ಸೆಂಟರ್ ಆಫ್ ಎಕ್ಸ್ಲೆನ್ಸ್(ಸಿಸಿಒಇ) ಬಂಧಿಸಿದೆ. ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಅವರು ಮಂಗಳವಾರ ಪುರೋಹಿತ್ ಬಂಧನವನ್ನು ಪ್ರಕಟಿಸಿದರು.
ಪುರೋಹಿತ್ನ ಸಬ್ ಏಜೆಂಟ್ಗಳಾದ ಹಿತೇಶ್ ಸೋಮೈಯಾ ಮತ್ತು ಸೋನಾಲ ಫಾಲ್ದು ಹಾಗೂ ಇತರ ಇಬ್ಬರು ಆರೋಪಿಗಳಾದ ಭಾವದೀಪ ಜಡೇಜಾ ಮತ್ತು ಹರ್ದೀಪ್ ಜಡೇಜಾ ಅವರನ್ನೂ ಪೋಲಿಸರು ಬಂಧಿಸಿದ್ದಾರೆ.
ಕ್ರಿಮಿನಲ್ ಒಳಸಂಚಿನ ಜೊತೆಗೆ ಮಾನವ ಕಳ್ಳಸಾಗಣೆ ಆರೋಪದಲ್ಲಿ ಪುರೋಹಿತ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಪುರೋಹಿತ್ನನ್ನು 14 ದಿನಗಳ ಅವಧಿಗೆ ಸಿಸಿಒಇ ಕಸ್ಟಡಿಗೆ ಒಪ್ಪಿಸಿದೆ.
ಪುರೋಹಿತ್ ಸಂಘಟಿತ ಅಂತರರಾಷ್ಟ್ರೀಯ ಸೈಬರ್ ಗುಲಾಮಗಿರಿ ಜಾಲವನ್ನು ನಡೆಸುತ್ತಿದ್ದ ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ. ಆತ 126ಕ್ಕೂ ಅಧಿಕ ಸಬ್-ಏಜೆಂಟ್ಗಳನ್ನು ಹೊಂದಿದ್ದ. ಆರೋಪಿಯು 30ಕ್ಕೂ ಅಧಿಕ ಪಾಕಿಸ್ತಾನಿ ಏಜೆಂಟ್ಗಳ ಜೊತೆ ಸಂಪರ್ಕದಲ್ಲಿದ್ದ. ಸೈಬರ್ ವಂಚನೆ ಕೇಂದ್ರಗಳಿಗೆ ಜನರನ್ನು ಪೂರೈಸುತ್ತಿದ್ದ 100ಕ್ಕೂ ಅಧಿಕ ಚೀನಿ ಮತ್ತು ವಿದೇಶಿ ಕಂಪನಿಗಳ ಮಾನವ ಸಂಪನ್ಮೂಲ ಜಾಲದೊಂದಿಗೆ ನೇರ ಸಂಪರ್ಕದಲ್ಲಿದ್ದ. ಆರೋಪಿಯು ಸೈಬರ್ ಗುಲಾಮಗಿರಿಗಾಗಿ 1,000ಕ್ಕೂ ಅಧಿಕ ಜನರನ್ನು ವಿದೇಶಗಳಿಗೆ ಕಳುಹಿಸಲು ಒಪ್ಪಂದವನ್ನು ಮಾಡಿಕೊಂಡಿದ್ದು ಕಂಡುಬಂದಿದೆ. ಬಂಧನಕ್ಕೆ ಒಂದು ದಿನ ಮೊದಲಷ್ಟೇ ಆತ ಪಂಜಾಬಿ ಯುವಕನೋರ್ವನನ್ನು ಕಾಂಬೋಡಿಯಾಕ್ಕೆ ಕಳುಹಿಸಿದ್ದ. ಆತ ದುಬೈ,ಲಾವೋಸ್, ಥೈಲ್ಯಾಂಡ್,ಮ್ಯಾನ್ಮಾರ್ ಮತ್ತು ಇರಾನ್ಗೆ ಪ್ರಯಾಣಿಸಿದ್ದ ಎನ್ನುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸರಕಾರಿ ಹೇಳಿಕೆಯು ತಿಳಿಸಿದೆ.
ಪುರೋಹಿತ್ ಭಾರತ,ಶ್ರೀಲಂಕಾ,ಫಿಲಿಪ್ಪೀನ್ಸ್,ಪಾಕಿಸ್ತಾನ, ಬಾಂಗ್ಲಾದೇಶ,ನೇಪಾಳ,ನೈಜೀರಿಯಾ,ಈಜಿಪ್ಟ್,ಕ್ಯಾಮರೂನ್,ಬೆನಿನ್ ಮತ್ತು ಟ್ಯುನಿಷಿಯಾಗಳಿಂದ 500ಕ್ಕೂ ಅಧಿಕ ಜನರನ್ನು ಸೈಬರ್ ಗುಲಾಮಗಿರಿಗಾಗಿ ಕಾಂಬೋಡಿಯಾ,ಮ್ಯಾನ್ಮಾರ್,ವಿಯೆಟ್ನಾಂ ಮತ್ತು ಥೈಲ್ಯಾಂಡ್ಗೆ ನೇರವಾಗಿ ಅಥವಾ ದುಬೈ ಮೂಲಕ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ಪುರೋಹಿತ್ ಸೈಬರ್ ಗುಲಾಮಗಿರಿಗಾಗಿ ತಾನು ಪೂರೈಸುತ್ತಿದ್ದ ಪ್ರತಿ ವ್ಯಕ್ತಿಗೆ 1.6 ಲ.ರೂ.ಗಳಿಂದ 3.7 ಲ.ರೂ.ವರೆಗೆ ಕಮಿಷನ್ ಪಡೆಯುತ್ತಿದ್ದ ಮತ್ತು ಇದರಲ್ಲಿ ಶೇ.30ರಿಂದ 40ರಷ್ಟನ್ನು ಸಬ್ ಏಜೆಂಟ್ಗಳಿಗೆ ನೀಡುತ್ತಿದ್ದ ಎಂದು ಹೇಳಿಕೆಯು ತಿಳಿಸಿದೆ.
ಭಾರತ ಸರಕಾರವು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಸರಕಾರಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ,ಕಳೆದ ಮೂರು ದಿನಗಳಲ್ಲಿ ಸೈಬರ್ ಗುಲಾಮರಾಗಿ ದುಡಿಯುತ್ತಿದ್ದ ಸುಮಾರು 4,000 ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತಂದಿದೆ.







