Maharashtra | ಗುಜರಾತಿ ಭಾಷೆಯಲ್ಲಿ traffic ನಿಯಮಗಳನ್ನು ಹೊರಡಿಸಿದ ಜಿಲ್ಲಾಡಳಿತ: ಭುಗಿಲೆದ್ದ ಭಾಷಾ ವಿವಾದ

ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾಡಳಿತವು ಗುಜರಾತಿ ಭಾಷೆಯಲ್ಲಿ ಹೊರಡಿಸಿರುವ ಅಧಿಸೂಚನೆಯಿಂದ ರಾಜ್ಯದಲ್ಲಿ ಭಾಷಾ ವಿವಾದ ಭುಗಿಲೆದ್ದಿದೆ. ಇದೊಂದು ಗಂಭೀರ ವಿಷಯವಾಗಿದ್ದು, ರಾಜ್ಯದಲ್ಲಿ ಶೀಘ್ರವೇ ಗುಜರಾತಿ ಭಾಷೆ ಹೇರಿಕೆ ನಡೆಯಲಿದೆ ಎಂದು ಕಾಂಗ್ರೆಸ್ ಹಾಗೂ ಶಿವಸೇನೆ (UBT) ಆರೋಪಿಸಿವೆ.
ಜ. 19 ಮತ್ತು 20ರಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಪಾಲ್ಘರ್ ಜಿಲ್ಲೆಯಲ್ಲಿ ಜಾಥಾ ನಡೆಯಲಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಹೆದ್ದಾರಿಯ ಕೆಲ ಭಾಗಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಗುಜರಾತಿ ಭಾಷೆಯಲ್ಲಿ ಆದೇಶ ಹೊರಡಿಸಿದೆ.
ವರದಿಗಳ ಪ್ರಕಾರ, ಗುಜರಾತ್ನಿಂದ ಆಗಮಿಸುವ ವಾಹನ ಚಾಲಕರಿಗೆ ಅನುಕೂಲವಾಗಲೆಂದು ಈ ಆದೇಶವನ್ನು ಗುಜರಾತಿ ಭಾಷೆಗೆ ಅನುವಾದಿಸಿ, ಅಚ್ಚಡ್ ಬಳಿಯ ಪ್ರದೇಶಗಳು ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಪ್ರದರ್ಶಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ಸ್ಪಷ್ಟೀಕರಣ ನೀಡಿರುವ ಅಧಿಕಾರಿಗಳು, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸುವ ಮೂಲ ಅಧಿಸೂಚನೆಯನ್ನು ಮರಾಠಿ ಭಾಷೆಯಲ್ಲಿ ಹೊರಡಿಸಲಾಗಿದ್ದು, ಮರಾಠಿ ಭಾಷೆಯನ್ನು ಕಡೆಗಣಿಸುವ ಅಥವಾ ಅಗೌರವ ತೋರುವ ಯಾವುದೇ ಉದ್ದೇಶ ಈ ಕ್ರಮದ ಹಿಂದೆ ಇಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್, ಗುಜರಾತಿ ಭಾಷೆಯಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ಟೀಕಿಸಿದ್ದಾರೆ.
“ಇದು ಕೇವಲ ಆರಂಭ. ಪಾಲ್ಘರ್ನಿಂದ ಗುಜರಾತಿ ಭಾಷೆಯನ್ನು ಹೇರಲಾಗುತ್ತಿದೆ. ಒಂದು ವೇಳೆ ಬಿಜೆಪಿಗೆ ಮುಂಬೈ ಮೇಯರ್ ಸ್ಥಾನ ದೊರೆತರೆ, ಯಾರ ನಿರ್ದೇಶನದ ಮೇಲೆ ನಗರ ನಡೆಯಲಿದೆ ಎಂಬುದು ಸ್ಪಷ್ಟವಾಗಲಿದೆ,” ಎಂದು ಅವರು ಟೀಕಾಪ್ರಹಾರ ನಡೆಸಿದರು.
ಈ ಅಧಿಸೂಚನೆಯ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ಪಷ್ಟೀಕರಣ ನೀಡಬೇಕು ಎಂದು ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
“ಎಲ್ಲ ಪಕ್ಷಗಳೂ ಈ ಕುರಿತು ಗಂಭೀರವಾಗಿ ಆಲೋಚಿಸಬೇಕು. ಪಾಲ್ಘರ್ ಮಹಾರಾಷ್ಟ್ರದ ಭಾಗವಾಗಿದೆಯೋ ಅಥವಾ ವಾಧ್ವಾನ್ ಬಂದರಿಗೆ ಬುಲೆಟ್ ರೈಲನ್ನು ಸಂಪರ್ಕಿಸುವ ನೆಪದಲ್ಲಿ ನೆರೆಯ ರಾಜ್ಯದೊಂದಿಗೇನಾದರೂ ಸೇರಿಸಲಾಗಿದೆಯೋ?” ಎಂದು ಅವರು ಪ್ರಶ್ನಿಸಿದರು.
ಈ ನಡುವೆ ಭಂಡಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ಪಾಲ್ಘರ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಅಲ್ಲಗಳೆದಿದ್ದಾರೆ.







