ನಟ ವಿಜಯ್ ರ್ಯಾಲಿಗೆ ನುಗ್ಗಲು ಯತ್ನಿಸಿದ ಬಂದೂಕುಧಾರಿಯ ಬಂಧನ

Photo Credit : indiatoday.in
ಪುದುಚೇರಿ: ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಂಗಳವಾರ ಭದ್ರತಾ ವೈಫಲ್ಯವಾದ ಘಟನೆ ನಡೆದಿದೆ. ಎಕ್ಸ್ಪೋ ಮೈದಾನ ಪ್ರವೇಶಿಸುವ ವೇಳೆ ಬಂದೂಕು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತನನ್ನು ಟಿವಿಕೆ ಶಿವಗಂಗೈ ಜಿಲ್ಲಾ ಕಾರ್ಯದರ್ಶಿ ಪ್ರಭು ಅವರ ಅಂಗರಕ್ಷಕ ಡೇವಿಡ್ ಎಂಬುದು ಗುರುತಿಸಲಾಗಿದೆ.
ಕರೂರ್ ಕಾಲ್ತುಳಿತ ದುರಂತದಲ್ಲಿ 41 ಜನರು ಸಾವನ್ನಪ್ಪಿದ ನಂತರ ವಿಜಯ್ ಪಾಲ್ಗೊಂಡ ಮೊದಲ ಮಹತ್ತರ ಸಾರ್ವಜನಿಕ ಸಮಾವೇಶವಾಗಿರುವುದರಂದ ಸ್ಥಳದಲ್ಲಿ ಬಿಗಿ ಭದ್ರತೆ ಹೇರಲಾಗಿತ್ತು. ಇದರ ಮಧ್ಯೆಯೇ, ಸಭೆಗೆ ಆಗಮಿಸಿದ್ದ ಬೆಂಬಲಿಗರಲ್ಲಿ ಕೆಲವರು ಬ್ಯಾರಿಕೇಡ್ಗಳನ್ನು ದಾಟಲು ಯತ್ನಿಸಿದ್ದು, ಪೊಲೀಸರು ಹೆಚ್ಚುವರಿ ಜನಸಂದಣಿ ನಿಯಂತ್ರಿಸಲು ಮುಂದಾದರು.
ಸಭೆಗೆ ಮುನ್ನವೇ ಪುದುಚೇರಿ ಪೊಲೀಸರು ವಿಶೇಷ ಮಾರ್ಗಸೂಚಿ ಹೊರಡಿಸಿದ್ದರು. ಕಾರ್ಯಕ್ರಮಲ್ಲಿ 5,000 ಜನರಿಗಷ್ಟೇ ಪಾಲ್ಗೊಳ್ಳಲು ಮಿತಿ ಹೇರಿದ್ದರು. ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳಿಂದ ಆಗಮಿಸುವವರಿಗೆ ಪ್ರವೇಶ ನಿಷೇಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಕಾನೂನು ಸುವ್ಯವಸ್ಥೆ) ಆರ್. ಕಲೈವಾಣನ್ ತಿಳಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರಿಗೆ ಪ್ರವೇಶವನ್ನು ನಿರಾಕರಿಸಲಾಯಿತು.
ಪಕ್ಷ ನೀಡಿದ ಮಾನ್ಯ QR ಪಾಸ್ ಹೊಂದಿರುವವರಿಗೆ ಮಾತ್ರ ಸಮಾವೇಶ ಆಯೋಜಿಸಿದ್ದ ಮೈದಾನಕ್ಕೆ ಪ್ರವೇಶಕ್ಕೆ ಅನುಮತಿಸಲಾಯಿತು. ಪುದುಚೇರಿ ಮರೀನಾ, ಕ್ರೀಡಾಂಗಣ ಹಿಂಭಾಗ ಹಾಗೂ ಹಳೆಯ ಬಂದರು ಪ್ರದೇಶಗಳನ್ನು ವಾಹನ ನಿಲುಗಡೆ ಸ್ಥಳಗಳಾಗಿ ಗುರುತಿಸಲಾಗಿತ್ತು. ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ಆಂಬ್ಯುಲೆನ್ಸ್, ವೈದ್ಯಕೀಯ ತಂಡ ಹಾಗೂ ಅಗ್ನಿಶಾಮಕ ಸಾಧನಗಳನ್ನು ಒದಗಿಸುವಂತೆ ಸಂಘಟಕರಿಗೆ ಸೂಚನೆ ನೀಡಲಾಗಿತ್ತು.
ಇದಕ್ಕೂ ಮೊದಲು, ರೋಡ್ ಶೋಗೆ ಪೊಲೀಸರು ಅನುಮತಿ ನಿರಾಕರಿಸಿ, ಕಟ್ಟುನಿಟ್ಟಿನ ಷರತ್ತುಗಳಡಿ ಸಾರ್ವಜನಿಕ ಸಭೆಗೆ ಮಾತ್ರ ಅವಕಾಶ ನೀಡಿದ್ದರು.







