ಪಂಜಾಬ್ | ಜೈಲಿನಲ್ಲಿರುವ ಎಸ್ಎಡಿ ನಾಯಕ ಮಜಿಥಿಯಾರನ್ನು ಭೇಟಿಯಾದ ಗುರಿಂದರ್ ಸಿಂಗ್ ಧಿಲ್ಲೋನ್

ಗುರಿಂದರ್ ಸಿಂಗ್ ಧಿಲ್ಲೋನ್ | PC : X
ಪಟಿಯಾಳಾ, ಸೆ.23: ರಾಧಾಸ್ವಾಮಿ ಸತ್ಸಂಗ್ ಬಿಯಾಸ್ ಪಂಥದ ಮುಖ್ಯಸ್ಥ ಗುರಿಂದರ್ ಸಿಂಗ್ ಧಿಲ್ಲೋನ್ ಮಂಗಳವಾರ ಇಲ್ಲಿಯ ನ್ಯೂ ನಭಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿರೋಮಣಿ ಅಕಾಲಿ ದಳದ(ಎಸ್ಎಡಿ) ನಾಯಕ ಹಾಗೂ ಮಾಜಿ ಪಂಜಾಬ್ ಸಚಿವ ಬಿಕ್ರಮ ಸಿಂಗ್ ಮಜಿಥಿಯಾರನ್ನು ಭೇಟಿಯಾಗಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಮಜಿಥಿಯಾರ ಭೇಟಿಯ ಬಳಿಕ ಧಿಲ್ಲೋನ್ ಜೈಲಿನ ಬಳಿ ಸೇರಿದ್ದ ತನ್ನ ಅನುಯಾಯಿಗಳೊಂದಿಗೆ ಸಂವಾದ ನಡೆಸಿದರು. ಅವರು ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ.
ಧಿಲ್ಲೋನ್ ಭೇಟಿಗೆ ಮುನ್ನ ಜೈಲಿನೊಳಗೆ ಮತ್ತು ಸುತ್ತಮುತ್ತ ಬಿಗು ಭದ್ರತೆಯನ್ನು ಏರ್ಪಡಿಸಲಾಗಿತ್ತು. ಜಾಗ್ರತ ಘಟಕವು 540 ಕೋ.ರೂ.ಗಳ ‘ಡ್ರಗ್ ಮನಿ’ಯ ಅಕ್ರಮ ವರ್ಗಾವಣೆಯನ್ನು ಒಳಗೊಂಡಿರುವ ಅಕ್ರಮ ಸಂಪತ್ತು ಪ್ರಕರಣದಲ್ಲಿ ಮಜಿಥಿಯಾರನ್ನು ಜೂ.25ರಂದು ಬಂಧಿಸಿತ್ತು.
ಮಜಿಥಿಯಾ ವಿರುದ್ಧದ ಎಫ್ಐಆರ್ 2021ರ ಮಾದಕ ದ್ರವ್ಯ ಪ್ರಕರಣದಲ್ಲಿ ಪಂಜಾಬ್ ಪೋಲಿಸ್ನ ವಿಶೇಷ ತನಿಖಾ ತಂಡವು ನಡೆಸುತ್ತಿರುವ ತನಿಖೆಯನ್ನು ಆಧರಿಸಿದೆ.
2021ರಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಮಜಿಥಿಯಾ ಆಗಸ್ಟ್ 2022ರಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಅಮೃತಸರದಿಂದ 45 ಕಿ.ಮೀ.ದೂರದ ಬಿಯಾಸ್ ಪಟ್ಟಣದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ರಾಧಾಸ್ವಾಮಿ ಸತ್ಸಂಗಕ್ಕೆ ದೇಶಾದ್ಯಂತ , ವಿಶೇಷವಾಗಿ ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅನುಯಾಯಿಗಳಿದ್ದಾರೆ.







