Guwahati ಹೈಕೋರ್ಟ್ ವಕೀಲರಿಂದ ಉಪವಾಸ ಮುಷ್ಕರ, CJI ಕಾರ್ಯಕ್ರಮಕ್ಕೆ ಬಹಿಷ್ಕಾರ

Photo | HC website
ಗುವಾಹಟಿ (ಅಸ್ಸಾಂ), ಜ.11: ಉಚ್ಚ ನ್ಯಾಯಾಲಯದ ಸ್ಥಳಾಂತರವನ್ನು ವಿರೋಧಿಸಿ ಗುವಾಹಟಿ ಹೈಕೋರ್ಟ್ ವಕೀಲರ ಸಂಘವು (ಜಿಎಚ್ಸಿಬಿಎ) ರವಿವಾರ ನಾಲ್ಕು ಗಂಟೆಗಳ ಉಪವಾಸ ಮುಷ್ಕರವನ್ನು ನಡೆಸಿದ್ದು, ಭಾರತದ ಮುಖ್ಯ ನ್ಯಾಯಾಧೀಶ (CJI) ಸೂರ್ಯಕಾಂತ ಅವರಿಂದ ನೂತನ ಹೈಕೋರ್ಟ್ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮವನ್ನೂ ಬಹಿಷ್ಕರಿಸಿದೆ.
ಉತ್ತರ ಗುವಾಹಟಿಯ ರಂಗಮಹಲ್ನಲ್ಲಿ ಸುಮಾರು 49 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ನೂತನ ಹೈಕೋರ್ಟ್ ಸಂಕೀರ್ಣ ನಿರ್ಮಾಣಗೊಳ್ಳಲಿದೆ.
ಜಿಎಚ್ಸಿಬಿಎ ಸದಸ್ಯರು ಗುರುವಾರ ಮತ್ತು ಶುಕ್ರವಾರವೂ ನಗರದ ಹೃದಯಭಾಗದಲ್ಲಿರುವ ಗುವಾಹಟಿ ಉಚ್ಚ ನ್ಯಾಯಾಲಯದ ಹಳೆಯ ಕಟ್ಟಡದ ಮುಂದೆ ನಾಲ್ಕು ಗಂಟೆಗಳ ಉಪವಾಸ ಮುಷ್ಕರ ನಡೆಸಿದ್ದರು.
ಬ್ರಹ್ಮಪುತ್ರ ನದಿಯ ಉತ್ತರ ದಂಡೆಗೆ ನ್ಯಾಯಾಲಯದ ಸ್ಥಳಾಂತರವನ್ನು ಜಿಎಚ್ಸಿಬಿಎ ಆರಂಭದಿಂದಲೂ ಬಲವಾಗಿ ವಿರೋಧಿಸುತ್ತಿದೆ. ಆದರೆ ಸರಕಾರವು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ನೂತನ ಸಂಕೀರ್ಣದ ನಿರ್ಮಾಣಕ್ಕೆ ಮುಂದಾಗಿದೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಶಂತನು ಬೋರ್ಥಾಕುರ್ ಆರೋಪಿಸಿದರು.





