‘The Wire’ ನ ಸಿದ್ಧಾರ್ಥ ವರದರಾಜನ್, ಕರಣ್ ಥಾಪರ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಎಫ್ಐಆರ್; ಪತ್ರಕರ್ತರ ಸಂಘಗಳ ಖಂಡನೆ

ಸಿದ್ಧಾರ್ಥ ವರದರಾಜನ್ , ಕರಣ ಥಾಪರ್ |PC : FACEBOOK
ಹೊಸದಿಲ್ಲಿ: ಅಸ್ಸಾಂ ಪೋಲಿಸ್ನ ಕ್ರೈಂ ಬ್ರ್ಯಾಂಚ್ ಹಿರಿಯ ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್ ಮತ್ತು ಕರಣ ಥಾಪರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ(ಬಿಎನ್ಎಸ್)ದ ಕಲಂ 152ರಡಿ ದೇಶದ್ರೋಹದ ಆರೋಪಗಳನ್ನು ಹೊರಿಸಿ ಎಫ್ಐಆರ್ ದಾಖಲಿಸಿರುವ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ(ಪಿಸಿಐ) ಮತ್ತು ವಿಮೆನ್ಸ್ ಪ್ರೆಸ್ ಕಾರ್ಪ್ಸ್ ದಿಗ್ಭ್ರಮೆಯನ್ನು ವ್ಯಕ್ತಪಡಿಸಿವೆ.
ಇದು ʼThe Wireʼ ವಿರುದ್ಧ ಎರಡು ತಿಂಗಳುಗಳಲ್ಲಿ ದಾಖಲಾಗಿರುವ ಎರಡನೇ ಎಫ್ಐಆರ್ ಆಗಿದೆ ಎಂದು ಬೆಟ್ಟು ಮಾಡಿರುವ ಈ ಸಂಘಟನೆಗಳು ಅಸ್ಸಾಂ ಪೋಲಿಸರು ಕ್ರೈಂ ಬ್ರ್ಯಾಂಚ್ ಮೂಲಕ ಪತ್ರಕರ್ತರ ವಿರುದ್ಧ ಪ್ರತೀಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿವೆ.
ಸರ್ವೋಚ್ಚ ನ್ಯಾಯಾಲಯವು The Wire ನಲ್ಲಿ ಪ್ರಕಟಿತ ಆಪರೇಷನ್ ಸಿಂಧೂರ ಕುರಿತು ವರದಿಗೆ ಸಂಬಂಧಿಸಿದಂತೆ ಜು.11,2025ರಂದು ಅಸ್ಸಾಮಿನ ಮೋರಿಗಾಂವ್ನಲ್ಲಿ ಬಿಎನ್ಎಸ್ ಕಲಂ 152ರಡಿ ದಾಖಲಾದ ಎಫ್ಐಆರ್ನಲ್ಲಿ ವರದರಾಜನ್ ಮತ್ತು ‘The Wire’ ನ ಎಲ್ಲ ಪತ್ರಕರ್ತರಿಗೆ ಬಂಧನದಿಂದ ರಕ್ಷಣೆ ನೀಡಿದ್ದರೂ ಆ.12ರಂದು ಈ ಸಮನ್ಸ್ ಹೊರಡಿಸಲಾಗಿದೆ ಎನ್ನುವುದು ಗಮನಾರ್ಹವಾಗಿದೆ. ಯಾವುದೇ ಕಾರಣವಿಲ್ಲದೆ ಇನ್ನೊಂದು ಎಫ್ಐಆರ್ ದಾಖಲಿಸಿರುವ ಪೋಲಿಸರು ಆ.22ರಂದು ಗುವಾಹಟಿಯ ಕ್ರೈಂ ಬ್ರ್ಯಾಂಚ್ ಪೋಲಿಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ವರದರಾಜನ್ ಮತ್ತು ಥಾಪರ್ ಅವರಿಗೆ ಸೂಚಿಸಿದ್ದಾರೆ. ಹಾಜರಾಗದಿದ್ದರೆ ಅವರ ಬಂಧನವಾಗುವ ಭೀತಿಯಿದೆ ಎಂದು ಸಂಘಟನೆಗಳು ಹೇಳಿಕೆಯಲ್ಲಿ ತಿಳಿಸಿವೆ.
ಹಿಂದಿನ ಐಪಿಸಿಯ ಕಲಂ 124ಎ ಅಡಿ ದೇಶದ್ರೋಹಕ್ಕಾಗಿ ವಿಚಾರಣೆಗಳು ಮತ್ತು ಕ್ರಿಮಿನಲ್ ಕಲಾಪಗಳನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮೇ 2022ರಲ್ಲಿ ಆದೇಶಿಸಿತ್ತು. ಜುಲೈ 2024ರಲ್ಲಿ ಐಪಿಸಿಯ ಬದಲು ಬಿಎನ್ಎಸ್ ಜಾರಿಗೊಂಡಾಗ ಕಲಂ 152ರ ರೂಪದಲ್ಲಿ ಕಲಂ 124ಎ ಅನ್ನು ಮತ್ತೆ ಕಾನೂನಿನಲ್ಲಿ ಸೇರಿಸಲಾಗಿದೆ ಎಂದು ಹೇಳಿಕೆಯು ಬೆಟ್ಟು ಮಾಡಿದ್ದು, ಈ ಕಲಂ ಈಗ ಭಾರತದಲ್ಲಿ ಪತ್ರಕರ್ತರನ್ನು ಗುರಿಯಾಗಿಸಿಕೊಳ್ಳಲು ಸಾಧನವಾಗಿದೆ ಎಂದು ಆರೋಪಿಸಿದೆ.
ಹಿರಿಯ ಪತ್ರಕರ್ತರ ವಿರುದ್ಧದ ಪ್ರಕರಣಗಳನ್ನು ಮತ್ತು ಸಂವಿಧಾನದ 19(1)ಎ ಅಡಿ ಹೇಳಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆಯೊಡ್ಡುವ ಬಿಎನ್ಎಸ್ನ ಕರಾಳ ಕಲಂ 152ನ್ನು ತಕ್ಷಣವೇ ಹಿಂದೆಗೆದುಕೊಳ್ಳಬೇಕು ಎಂದು ಈ ಸಂಘಟನೆಗಳು ಆಗ್ರಹಿಸಿವೆ.







