ಸುಪ್ರೀಂಕೋರ್ಟ್ ರಕ್ಷಣೆ ನೀಡಿದ್ದರೂ ‘ The Wire’ ಸಂಪಾದಕರಿಗೆ ಗುವಾಹಟಿ ಪೋಲಿಸರ ಸಮನ್ಸ್

ಸಿದ್ಧಾರ್ಥ್ ವರದರಾಜನ್ | PC : Siddharth Varadarajan/Facebook
ಹೊಸದಿಲ್ಲಿ: ಆಪರೇಷನ್ ಸಿಂಧೂರ ಕುರಿತು ಲೇಖನಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರಲ್ಲಿ ಗುವಾಹಟಿಯ ಕ್ರೈಂ ಬ್ರ್ಯಾಂಚ್ ಪೋಲಿಸರು ಸುದ್ದಿ ಜಾಲತಾಣ ‘ The Wire’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಅಸ್ಸಾಂ ಪೋಲಿಸರು ದಾಖಲಿಸಿರುವ ಇನ್ನೊಂದು ಎಫ್ಐಆರ್ನಲ್ಲಿ ವರದರಾಜನ್ ಮತ್ತು ಸುದ್ದಿ ಜಾಲತಾಣವನ್ನು ನಡೆಸುತ್ತಿರುವ ಪ್ರತಿಷ್ಠಾನದ ಸದಸ್ಯರಿಗೆ ಬಂಧನದಿಂದ ರಕ್ಷಣೆ ನೀಡಿದ್ದರೂ ಆ.12ರಂದು ಈ ಸಮನ್ಸ್ ನೀಡಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶವು ‘ಬೇರೆ ಯಾವುದೋ ಜಿಲ್ಲೆಯಲ್ಲಿ’ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿರುವುದರಿಂದ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಗುವಾಹಟಿಯ ಜಂಟಿ ಪೋಲಿಸ್ ಆಯುಕ್ತ ಅಂಕುರ ಜೈನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆ.22ರಂದು ಪೂರ್ವಾಹ್ನ 11:30 ಗಂಟೆಗೆ ಪಾನ್ಬಜಾರ್ನಲ್ಲಿಯ ಕ್ರೈಂ ಬ್ರ್ಯಾಂಚ್ ಪೋಲಿಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ವರದರಾಜನ್ ಅವರಿಗೆ ಸಮನ್ಸ್ನಲ್ಲಿ ಸೂಚಿಸಲಾಗಿದೆ.
ವರದರಾಜನ್ ವಿರುದ್ಧ ಮೊದಲಿನ ಪ್ರಕರಣವು ಜು.11ರಂದು ಮೋರಿಗಾಂವ್ ಠಾಣೆಯಲ್ಲಿ ಬಿಎನ್ಎಸ್ ಕಲಂ 152ರಡಿ ದಾಖಲಾಗಿದ್ದು,ಇದು ಭಾರತದ ಸಾರ್ವಭೌಮತ್ವ,ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ.
ಆಪರೇಷನ್ ಸಿಂಧೂರ ಕುರಿತು ‘ರಾಜಕೀಯ ನಾಯಕತ್ವದ ನಿರ್ಬಂಧಗಳಿಂದಾಗಿ ಐಎಎಫ್ ಪಾಕ್ ದಾಳಿಯಲ್ಲಿ ತನ್ನ ಯುದ್ಧವಿಮಾನಗಳನ್ನು ಕಳೆದುಕೊಂಡಿತು:ರಕ್ಷಣಾ ಅಧಿಕಾರಿ’ ಶೀರ್ಷಿಕೆಯ ಲೇಖನ ಪ್ರಕಟಗೊಂಡ ಬಳಿಕ ಈ ಪ್ರಕರಣ ದಾಖಲಾಗಿತ್ತು.
ವರದರಾಜನ್ ಅವರಿಗೆ ನೀಡಲಾಗಿರುವ ಹೊಸ ಸಮನ್ಸ್ನಲ್ಲಿ ಅದೇ ಆರೋಪಗಳನ್ನು ಉಲ್ಲೇಖಿಸಲಾಗಿದೆ,ಜೊತೆಗೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ,ಸುಳ್ಳು ಅಥವಾ ದಾರಿ ತಪ್ಪಿಸುವ ಮಾಹಿತಿಗಳ ಪ್ರಕಟಣೆ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಬಿಎನ್ಎಸ್ ಕಲಮ್ಗಳಡಿಯೂ ಆರೋಪಗಳನ್ನು ಹೊರಿಸಲಾಗಿದೆ.
ಆ.12ರಂದು ಕಲಂ 152ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ‘ ಖಿhe Wiಡಿe’ ನ ಒಡೆತನ ಹೊಂದಿರುವ ಫೌಂಡೇಷನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಮತ್ತು ವರದರಾಜನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರ ಸರ್ವೋಚ್ಚ ನ್ಯಾಯಾಲಯದ ಪೀಠವು ವರದರಾಜನ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿತ್ತು.
ಈ ಕಾನೂನು ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ ಮರುರೂಪಿಸಲಾದ ಆವೃತ್ತಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಕೇಂದ್ರ ಸರಕಾರಕ್ಕೆ ನೋಟಿಸ್ ಹೊರಡಿಸಿದ್ದ ಪೀಠವು ಅರ್ಜಿಯನ್ನು ಕಲಂ 152ರ ಸಿಂಧುತ್ವವನ್ನು ಪ್ರಶ್ನಿಸಿದ್ದ ಇನ್ನೊಂದು ಅರ್ಜಿಯೊಂದಿಗೆ ಸೇರಿಸಿತ್ತು.
ಅರ್ಜಿದಾರರ ಪರ ನ್ಯಾಯವಾದಿ ನಿತ್ಯಾ ರಾಮಕೃಷ್ಣನ್ ಅವರು,ಸುದ್ದಿಲೇಖನವು ಇಂಡೋನೇಶ್ಯಾದ ವಿವಿಯೊಂದು ಆಯೋಜಿಸಿದ್ದ ವಿಚಾರ ಸಂಕಿರಣದ ವಾಸ್ತವಿಕ ವರದಿ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲಿ ಬಳಸಲಾಗಿದ್ದ ಮಿಲಿಟರಿ ತಂತ್ರಗಳ ಕುರಿತು ಭಾರತೀಯ ರಕ್ಷಣಾ ಅಧಿಕಾರಿ ನೀಡಿದ್ದ ಹೇಳಿಕೆಗಳನ್ನು ಆಧರಿಸಿತ್ತು ಎಂದು ವಾದಿಸಿದ್ದರು. ರಕ್ಷಣಾ ಅಧಿಕಾರಿಯ ಹೇಳಿಕೆಗಳಿಗೆ ಭಾರತೀಯ ರಾಯಭಾರ ಕಚೇರಿಯ ಪ್ರತಿಕ್ರಿಯೆಯನ್ನೂ ಲೇಖನವು ಒಳಗೊಂಡಿತ್ತು ಮತ್ತು ಇತರ ಮಾಧ್ಯಮ ಸಂಸ್ಥೆಗಳೂ ಸಹ ಇದನ್ನು ವರದಿ ಮಾಡಿದ್ದವು ಎಂದೂ ಅವರು ತಿಳಿಸಿದ್ದರು.
ಹಿಂದಿನ ಐಪಿಸಿಯ ಕಲಂ 124ಎ ಅಡಿ ದೇಶದ್ರೋಹಕ್ಕಾಗಿ ವಿಚಾರಣೆಗಳು ಮತ್ತು ಕ್ರಿಮಿನಲ್ ಕಲಾಪಗಳನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮೇ 2022ರಲ್ಲಿ ಆದೇಶಿಸಿತ್ತು.
ಜುಲೈ 2024ರಲ್ಲಿ ಐಪಿಸಿಯ ಬದಲು ಬಿಎನ್ಎಸ್ ಜಾರಿಗೊಂಡಾಗ ಕಲಂ 152ರ ರೂಪದಲ್ಲಿ ಕಲಂ 124ಎ ಅನ್ನು ಮತ್ತೆ ಕಾನೂನಿನಲ್ಲಿ ಸೇರಿಸಲಾಗಿದೆ ಎಂದು ಪ್ರತ್ಯೇಕ ವಿಷಯದಲ್ಲಿ ಟೀಕಾಕಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿದ್ದರು.







