ಮಧ್ಯಪ್ರದೇಶ | ಅಂಬೇಡ್ಕರ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ

ಅನಿಲ್ ಮಿಶ್ರಾ (Photo:X/@Adv_Anil_Mishra)
ಭೋಪಾಲ್ : ಮಧ್ಯಪ್ರದೇಶ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ, ವಕೀಲ ಅನಿಲ್ ಮಿಶ್ರಾ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ.
ಅನಿಲ್ ಮಿಶ್ರಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು "ಕೊಳಕು ವ್ಯಕ್ತಿ" ಮತ್ತು "ಬ್ರಿಟಿಷರ ಗುಲಾಮ" ಎಂದು ಅವಹೇಳನಾಕಾರಿ ಹೇಳಿಕೆ ನೀಡಿದ್ದು, ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಮಿಶ್ರಾ ಅವರನ್ನು ತಕ್ಷಣ ಬಂಧಿಸುವಂತೆ ದಲಿತ ಸಂಘಟನೆಗಳು ಮತ್ತು ಕೆಲ ವಕೀಲರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅನಿಲ್ ಮಿಶ್ರಾ, ಮಂಗಳವಾರ ಮಧ್ಯಾಹ್ನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಕ್ರೈಂ ಬ್ರಾಂಚ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.
“ನಾನು ತಪ್ಪು ಮಾಡಿಲ್ಲ, ಸಂವಿಧಾನ ನಮಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದೆ. ನಾನು ಅದರ ಪ್ರಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನನಗೆ ಭಯವಿಲ್ಲ, 100 ಎಫ್ಐಆರ್ಗಳು ದಾಖಲಾದರೂ ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ"
ಎಂದು ಅನಿಲ್ ಮಿಶ್ರಾ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ







