ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರು ತೆಗೆಯುವುದಿಲ್ಲ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

Photo Credit: PTI
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ತೆಗೆದು ಹಾಕುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಂಗಳವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಕ್ತ, ನ್ಯಾಯಯುತ ಹಾಗೂ ಶಾಂತಿಯುತ ಚುನಾವಣೆಗಳನ್ನು ನಡೆಸುವುದು ತನ್ನ ಆದ್ಯತೆಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ರಾಜಕೀಯ ಪಕ್ಷಗಳು ಹಾಗೂ ಹಿರಿಯ ಆಡಳಿತಾಧಿಕಾರಿಗಳೊಂದಿಗೆ ಸರಣಿ ಸಭೆಗಳ ಬಳಿಕ ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜ್ಞಾನೇಶ್ ಕುಮಾರ್ ಅವರು, ಪಶ್ಚಿಮಬಂಗಾಳದ ಜನತೆ ಯಾವತ್ತೂ ಶಾಂತಿಯುತ ಹಾಗೂ ಎಲ್ಲರಿಗೂ ಪಾಲ್ಗೊಳ್ಳಲು ಅವಕಾಶ ಇರುವ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂದರು.
‘‘ಪಶ್ಚಿಮ ಬಂಗಾಳದಲ್ಲಿ ಮುಕ್ತ, ನ್ಯಾಯಯುತ ಹಾಗೂ ಶಾಂತಿಯುತ ಚುನಾವಣೆಗಳನ್ನು ನಡೆಸುವುದು ನಮ್ಮ ಗುರಿ’’ ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ಅರ್ಹ ಮತದಾರನೂ ಮತ ಚಲಾಯಿಸಲು ಮುಕ್ತ ಅವಕಾಶ ಹೊಂದಿರುತ್ತಾರೆ ಎಂದು ಅವರು ಒತ್ತಿ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಮಾತನಾಡಿದ ಜ್ಞಾನೇಶ್ ಕುಮಾರ್, ಸಾಂವಿಧಾನಿಕ ನಿಯಮಗಳಿಗೆ ಅನುಸಾರವಾಗಿ ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದರು.
ಎಲ್ಲಾ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಮತದಾನಕ್ಕೆ ಅರ್ಹರಲ್ಲದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಮಾತ್ರ ತಾರ್ಕಿಕ ವ್ಯತ್ಯಾಸ ನಿಯಮವನ್ನು ತರಲಾಗಿದೆ ಎಂಬ ಪ್ರತಿಪಾದನೆಯನ್ನು ತಿರಸ್ಕರಿಸಿದ ಜ್ಞಾನೇಶ್ ಕುಮಾರ್ ಅವರು, ಎಲ್ಲಾ 12 ರಾಜ್ಯಗಳಲ್ಲಿಯೂ ಅಂತಹ ತಾರ್ಕಿಕ ವ್ಯತ್ಯಾಸ ನಿಯಮಗಳನ್ನು ತರಲಾಗಿದೆ. ಇತರ ರಾಜ್ಯಗಳಲ್ಲಿ ಅನುಸರಿಸಿದ ಪ್ರಕ್ರಿಯೆಯನ್ನೇ ಪಶ್ಚಿಮ ಬಂಗಾಳದಲ್ಲಿ ಕೂಡ ಅನುಸರಿಸಲಾಗಿದೆ ಎಂದರು.







