ಪ್ರಯಾಣಿಕನಿಗೆ ನೀಡಿದ್ದ ಆಹಾರದಲ್ಲಿ ಕೂದಲು ಪತ್ತೆ : ನಿರ್ಲಕ್ಷ್ಯಕ್ಕಾಗಿ ಏರ್ ಇಂಡಿಯಾಗೆ 35,000ರೂ. ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್

Photo: Reuters
ಚೆನ್ನೈ; ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಪೂರೈಸಿದ್ದ ಕೂದಲಿದ್ದ ಆಹಾರ ಸೇವಿಸಿ, ಆರೋಗ್ಯ ಸಮಸ್ಯೆಗೊಳಗಾಗಿದ್ದ ಪ್ರಯಾಣಿಕರೊಬ್ಬರಿಗೆ 35,000 ರೂ. ಪರಿಹಾರ ಪಾವತಿಸುವಂತೆ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಏರ್ ಇಂಡಿಯಾ ಸಿಬ್ಬಂದಿ ಪೂರೈಸಿದ್ದ ಆಹಾರ ಸೇವಿಸಿ, ಪ್ರಯಾಣಿಕ ವಾಂತಿ ಹಾಗೂ ಹೊಟ್ಟೆನೋವಿಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ಪ್ರಕರಣದ ಕುರಿತು ಇದಕ್ಕೂ ಮೊದಲು ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ತೊಂದರೆಗೊಳಗಾದ ಪ್ರಯಾಣಿಕರಿಗೆ ಒಂದು ಲಕ್ಷ ರೂ. ಪರಿಹಾರ ಪಾವತಿಸುವಂತೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ಏರ್ ಇಂಡಿಯಾ ಮದ್ರಾಸ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ.ಪಿ.ಬಿ.ಬಾಲಾಜಿ, ಏರ್ ಇಂಡಿಯಾ ವಾದವನ್ನು ಭಾಗಶಃ ಒಪ್ಪಿಕೊಂಡು, ಪರಿಹಾರ ಮೊತ್ತವನ್ನು 35,000ರೂ.ಗೆ ಕಡಿತಗೊಳಿಸಿದ್ದಾರೆ.
“ಒಂದು ಲಕ್ಷ ರೂ.ಪರಿಹಾರ ಪಾವತಿಸಬೇಕು ಎಂಬ ಆದೇಶವನ್ನು ನಾನು ಬದಿಗಿರಿಸುತ್ತಿದ್ದು, ಪ್ರತಿವಾದಿಗಳು ಅರ್ಜಿದಾರರಿಗೆ ನ್ಯಾಯಾಲಯದ ಶುಲ್ಕ ಮತ್ತಿತರ ವೆಚ್ಚ ಸೇರಿದಂತೆ 15,000ರೂ. ಹಾಗೂ ವಕೀಲರ ಶುಲ್ಕ 20,000ರೂ. ಅನ್ನು ಪಾವತಿಸಬೇಕು ಎಂದು ಆದೇಶಿಸುತ್ತಿದ್ದೇನೆ. ಇದು ಒಟ್ಟಾರೆಯಾಗಿ 35,000ರೂ. ಆಗಲಿದ್ದು, ಈ ಮೊತ್ತವನ್ನು ನಾಲ್ಕು ವಾರಗಳ ಅವಧಿಯೊಳಗೆ ಅರ್ಜಿದಾರರಿಗೆ ಪಾವತಿಸಬೇಕು ಎಂದು ಪ್ರತಿವಾದಿಗಳಿಗೆ ಸೂಚಿಸಲಾಗಿದೆ” ಎಂದು ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.





