2026ರ ಹಜ್ ಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Photo Credit | Reuters
ಮುಂಬೈ, ಆ. 13: 2026ನೇ ಸಾಲಿನ ಹಜ್ ಯಾತ್ರಿಕರನ್ನು ಆಯ್ಕೆ ಮಾಡಲು ಭಾರತೀಯ ಹಜ್ ಸಮಿತಿಯು ಬುಧವಾರ ಮುಂಬೈನ ಹಜ್ ಹೌಸ್ ನಲ್ಲಿ ಕುರ್ರಾ (ಲಾಟರಿ ಡ್ರಾ) ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ. ದೇಶದಾದ್ಯಂತ 1,94,007 ಮಂದಿ ಈ ಬಾರಿ ಹಜ್ ಗೆ ತೆರಳಲು ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಅರ್ಜಿಗಳನ್ನು ಸಲ್ಲಿಸಿದವರು ತಮ್ಮ ಅರ್ಜಿ ಆಯ್ಕೆಯ ಸ್ಥಿತಿಗತಿಯನ್ನು ಅಧಿಕೃತ ವೈಬ್ ಸೈಟ್ ನಲ್ಲಿ ಪರಿಶೀಲಿಸಬಹುದು ಎಂದು ಹಜ್ ಸಮಿತಿ ತಿಳಿಸಿದೆ.
ಸಮಿತಿಯ ಅಧಿಸೂಚನೆಯಂತೆ, ಈ ಕುರ್ರಾ ಪ್ರಕ್ರಿಯೆಯನ್ನು ಬೆಳಿಗ್ಗೆ 11:30 ಗಂಟೆಗೆ ಆರಂಭಿಸಲಾಗಿದ್ದು, ಅಧಿಕೃತ ವೆಬ್ಸೈಟ್ hajcommittee.gov.in ನಲ್ಲಿ ನೇರ ಪ್ರಸಾರವೂ ಮಾಡಲಾಯಿತು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಾತ್ಕಾಲಿಕ ಆಯ್ಕೆಗೊಂಡ ಹಾಗೂ ವೈಟಿಂಗ್ ಲಿಸ್ಟ್ ನಲ್ಲಿನ ಹಜ್ ಯಾತ್ರಿಕರ ವಿವರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅರ್ಜಿದಾರರಿಗೆ SMS ಮೂಲಕ ಸಹ ಮಾಹಿತಿಯನ್ನೂ ಕಳುಹಿಸಲಾಗಿದೆ.
ಅರ್ಜಿ ಸಲ್ಲಿಸಿದ್ದ ಯಾತ್ರಿಕರು ತಮ್ಮ ಕವರ್ ಸಂಖ್ಯೆ ಬಳಸಿ ಆಯ್ಕೆ ಸ್ಥಿತಿಯನ್ನು ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ತಾತ್ಕಾಲಿಕವಾಗಿ ಆಯ್ಕೆಯಾದವರು ಆಗಸ್ಟ್ 20 ರೊಳಗೆ 1,52,300 ರೂಪಾಯಿ ಮೊತ್ತದ ಮುಂಗಡ ಹಜ್ ಶುಲ್ಕವನ್ನು ಪಾವತಿಸಬೇಕಾಗಿದೆ. ಪಾವತಿ ವಿಳಂಬವಾದರೆ ಅವರ ಆಯ್ಕೆಯು ರದ್ದಾಗಲಿದೆ ಎಂದು ಸಮಿತಿಯು ಸ್ಪಷ್ಟಪಡಿಸಿದೆ.
2026 ರ ಹಜ್ ಯಾತ್ರೆಯು ಮೇ 24 ರಿಂದ 29 ರ ನಡುವೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ದೇಶದಾದ್ಯಂತ 18 ಎಂಬಾರ್ಕೇಶನ್ ತಾಣಗಳು ಸೇವೆಗೆ ಲಭ್ಯವಿದೆ. ಇದರಲ್ಲಿ ದಿಲ್ಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮುಂತಾದ ಪ್ರಮುಖ ನಗರಗಳು ಸೇರಿವೆ. ಭೋಪಾಲ್, ವಿಜಯವಾಡ, ಔರಂಗಾಬಾದ್ ಮುಂತಾದ ಕೆಲವು ನಗರಗಳಲ್ಲಿ ಈ ಬಾರಿ ಎಂಬಾರ್ಕೇಶನ್ ಸೌಲಭ್ಯ ಲಭ್ಯವಿರುವುದಿಲ್ಲ.
ಉದ್ಯೋಗಸ್ಥರಿಗೆ ಹಜ್ ಸಮಿತಿಯು ಈ ಬಾರಿ ಅಲ್ಪಾವಧಿಯ ಹಜ್ ಪ್ಯಾಕೇಜ್ ಒದಗಿಸಿದ್ದು, ಇದರಲ್ಲಿ 10,000 ಕ್ಕೂ ಹೆಚ್ಚು ಯಾತ್ರಿಕರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಪ್ಯಾಕೇಜ್ನಲ್ಲಿ 20 ದಿನಗಳ ಸೌದಿ ಅರೇಬಿಯಾದ ವಾಸ್ತವ್ಯ ಸೇರಿದ್ದು, ಅರ್ಜಿಗಳ ಸಂಖ್ಯೆ ಮಿತಿಗಿಂತ ಹೆಚ್ಚು ಇದ್ದರೆ, ಆಯ್ಕೆಗೆ ಮತ್ತೊಮ್ಮೆ ಕುರ್ರಾ ನಡೆಸಲಾಗುತ್ತದೆ.







