ಆರ್ಥಿಕ ಅಪರಾಧಿಗಳಿಗೆ ಕೈಕೋಳ ತೊಡಿಸಬಾರದು: ಸಂಸದೀಯ ಸಮಿತಿಯು ಶಿಫಾರಸು

Photo: PTI
ಹೊಸದಿಲ್ಲಿ: ಆರ್ಥಿಕ ಅಪರಾಧಗಳಿಗಾಗಿ ಬಂಧಿಸಲ್ಪಟ್ಟ ವ್ಯಕ್ತಿಗಳಿಗೆ ಕೈಕೋಳಗಳನ್ನು ತೊಡಿಸಬಾರದು ಮತ್ತು ಅವರನ್ನು ಅತ್ಯಾಚಾರ ಹಾಗೂ ಕೊಲೆಯಂತಹ ಘೋರ ಕೃತ್ಯಗಳಿಗಾಗಿ ಬಂಧಿಸಲ್ಪಟ್ಟರ ಜೊತೆಯಲ್ಲಿ ಇರಿಸಬಾರದು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ನಿಬಂಧನೆ 43(3)ರಲ್ಲಿ ವಿವರಿಸಿರುವಂತೆ ಆಯ್ದ ಘೋರ ಅಪರಾಧಗಳ ಆರೋಪಿಗಳು ಪರಾರಿಯಾಗುವುದನ್ನು ತಡೆಯಲು ಮತ್ತು ಬಂಧನಗಳ ಸಮಯ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಲು ಕೈಕೋಳಗಳ ಬಳಕೆ ಸೂಕ್ತವಾಗಿದೆ.
ಆದರೆ ಈ ವರ್ಗದಲ್ಲಿ ಆರ್ಥಿಕ ಅಪರಾಧಿಗಳನ್ನು ಸೇರಿಸಬಾರದು. ಏಕೆಂದರೆ ‘ಅರ್ಥಿಕ ಅಪರಾಧಗಳು’ ಪದವು ಚಿಲ್ಲರೆಯಿಂದ ಹಿಡಿದು ಗಂಭೀರ ಅಪರಾಧಗಳವರೆಗೆ ವ್ಯಾಪಕ ಶ್ರೇಣಿಯನ್ನು ಒಳಗೊಂಡಿರುತ್ತದೆ ಮತ್ತು ಈ ವರ್ಗದಲ್ಲಿಯ ಎಲ್ಲ ಅಪರಾಧಗಳಲ್ಲಿ ಕೈಕೋಳಗಳ ಸಾರಾಸಗಟು ಬಳಕೆಯು ಸೂಕ್ತವಲ್ಲ. ಹೀಗಾಗಿ ‘ಆರ್ಥಿಕ ಅಪರಾಧಗಳು’ ಪದವನ್ನು ಕೈಬಿಟ್ಟು ನಿಬಂಧನೆ 43 (3) ಅನ್ನು ಸೂಕ್ತವಾಗಿ ತಿದ್ದುಪಡಿಗೊಳಿಸಬಹುದು ಎಂದು ಸಮಿತಿಯು ಶಿಫಾರಸು ಮಾಡಿದೆ.





