"ಭಾರತದಲ್ಲಿ ಕೈಮಗ್ಗಗಳು: ನೇಕಾರಿಕೆ ಪರಂಪರೆ, ಭವಿಷ್ಯದ ಸಬಲೀಕರಣ"

ಪಬಿತ್ರ ಮಾರ್ಗರಿಟಾ (ಜವಳಿ ಖಾತೆ ರಾಜ್ಯ ಸಚಿವ)
ಪ್ರತಿ ವರ್ಷ ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವು ಭಾರತದ ಭೂತಕಾಲವನ್ನು ಅದರ ಭವಿಷ್ಯದ ಎಳೆಯಿಂದ ಎಳೆಗೆ, ಕಥೆಯಿಂದ ಕಥೆಗೆ ಬೆಸೆಯುವ ಕ್ಷಣವನ್ನು ಗುರುತಿಸುತ್ತದೆ. ಈ ದಿನವು 1905ರ ಸ್ವದೇಶಿ ಚಳವಳಿಯ ದಿನಗಳನ್ನು ನೆನಪು ಮಾಡಿಕೊಡುತ್ತದೆ, ಕೈಯಿಂದ ನೇಯ್ದ ಬಟ್ಟೆಯು, ಕೇವಲ ಬಟ್ಟೆಯ ತುಂಡಾಗಿ ಮಾತ್ರವಲ್ಲದೆ ಪ್ರತಿರೋಧ, ಸ್ವಾವಲಂಬನೆ ಮತ್ತು ಸಾಂಸ್ಕೃತಿಕ ಗುರುತಿನ ಪ್ರಬಲ ಸಂಕೇತವಾಗಿ ಹೊರಹೊಮ್ಮಿತು. ಒಂದು ಸ್ವಚ್ಛ ಹಲಗೆ (ಕ್ಲೀನ್ ಸ್ಲೇಟ್) ಆಗಿ ಆರಂಭವಾದದ್ದು ಪರಂಪರೆ, ಕಲೆ ಮತ್ತು ಸಮುದಾಯ ಅಭಿವ್ಯಕ್ತಿಯ ಎಳೆ ಎಳೆಯಾಗಿ ವಿಕಸನಗೊಂಡಿತು.
ಕೈಮಗ್ಗ ವಲಯವು ಇಂದು ಗ್ರಾಮೀಣ ಮತ್ತು ಸಣ್ಣ-ಪಟ್ಟಣಗಳಲ್ಲಿ ಭಾರತದಾದ್ಯಂತ 35 ಲಕ್ಷಕ್ಕೂ ಅಧಿಕ ನೇಕಾರರು ಮತ್ತು ಸಂಬಂಧಿತ ಕಾರ್ಮಿಕರನ್ನು ಬೆಂಬಲಿಸುತ್ತದೆ, ಅವರಲ್ಲಿ ಶೇ.72ರಷ್ಟು ಮಹಿಳೆಯರು ಎಂಬುದು ವಿಶೇಷ ವಾಗಿದೆ. ಜವಳಿ ವಲಯವು ತನ್ನೆಲ್ಲಾ ಶ್ರೀಮಂತಿಕೆಯೊಂದಿಗೆ, ಇದೀಗ ದುರ್ಬಲವಾಗದ ನಾವೀನ್ಯತೆ, ಅಳಿಸದ ತಂತ್ರಜ್ಞಾನ ಮತ್ತು ಆಧುನೀಕರಣವನ್ನು ಬೇಡುವ ಸ್ಥಾನದಲ್ಲಿ ನಿಂತಿದೆ.
ಶಾಶ್ವತ ಪರಂಪರೆ
ಭಾರತದಲ್ಲಿ ಕೈಮಗ್ಗ ನೇಯ್ಗೆಯ ಶ್ರೀಮಂತ ಪರಂಪರೆ ಹರಪ್ಪ ಮತ್ತು ಮೊಹೆಂಜೊ-ದಾರೊದ ಪ್ರಾಚೀನ ನಾಗರಿಕತೆ ಗಳ ಹಿಂದಿನದು. ಶತಮಾನಗಳು ಉರುಳಿದಂತೆ ಈ ಕರಕುಶಲ ಕಲೆಯು ಪ್ರತಿಯೊಂದು ಪ್ರದೇಶವು ತನ್ನದೇ ಆದ ನೇಯ್ಗೆ ವ್ಯಾಕರಣ, ತಂತ್ರಗಳು, ಲಕ್ಷಣಗಳು ಮತ್ತು ಅರ್ಥವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಅಸ್ಸಾಂನ ಮುಗಾ ರೇಷ್ಮೆಯ ಚಿನ್ನದ ಹೊಳಪಿನಿಂದ ಹಿಡಿದು ಪ್ರಸಿದ್ಧ ಬನಾರಸಿ ರೇಷ್ಮೆ ಸೀರೆಗಳವರೆಗೆ; ಕಾಶ್ಮೀರದ ಪಶ್ಮಿನಾದಿಂದ ತಮಿಳುನಾಡಿನ ಹೊಳೆಯುವ ಕಾಂಜೀವರಂ ಸೀರೆಗಳವರೆಗೆ, ಭಾರತದ ಕೈಮಗ್ಗ ಸಂಪ್ರದಾಯಗಳು ಅದರ ಜನರಂತೆಯೇ ವೈವಿಧ್ಯಮಯವಾಗಿವೆ.
ನೇಕಾರರ ಮನೆಯಲ್ಲಿ, ಮಗ್ಗವು ಹೆಚ್ಚಾಗಿ ಅಡುಗೆಮನೆ ಅಥವಾ ಪಕ್ಕದ ‘ಕೋಣೆ’ (ಅಂಗನ್) ಯೊಂದಿಗೆ ಜಾಗವನ್ನು ಹಂಚಿಕೊಂಡಿರುತ್ತದೆ. ಪ್ರತಿ ಸೀರೆ ಅಥವಾ ಶಾಲು ಒಂದು ರೀತಿಯ ಉಪಾಖ್ಯಾನವನ್ನು ಸಂವಹನ ಮಾಡಲು ಸಿದ್ಧಪಡಿಸಿದಂತಿರುತ್ತದೆ. ಕನಿಷ್ಠ ತಂತ್ರಜ್ಞಾನದೊಂದಿಗೆ, ಆದರೆ ಗರಿಷ್ಠ ಸೃಜನಶೀಲತೆಯೊಂದಿಗೆ, ನೇಕಾರರು ನೂಲುಗಳನ್ನು ಚರಾಸ್ತಿಗಳಾಗಿ ಪರಿವರ್ತಿಸುತ್ತಾರೆ. ಭಾರತೀಯ ಉಡುಪುಗಳ ಸಂಕೇತವಾಗಿರುವ ಹೊಲಿಗೆಯಿಲ್ಲದ ಡ್ರೇಪ್ ಪ್ರಾದೇಶಿಕ ಅಭಿವ್ಯಕ್ತಿ, ಆಚರಣೆಗಳು ಮತ್ತು ಕಥೆ ಹೇಳುವಿಕೆಯಾಗಿ ಬದಲಾಯಿತು. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸುವುದಾದರೆ ಅವರು "ಕೈಮಗ್ಗಗಳು ಭಾರತದ ವೈವಿಧ್ಯತೆ ಮತ್ತು ಅಸಂಖ್ಯಾತ ನೇಕಾರರು ಮತ್ತು ಕುಶಲಕರ್ಮಿಗಳ ಕೌಶಲ್ಯವನ್ನು ಅಭಿವ್ಯಕ್ತಪಡಿಸುತ್ತವೆ’’ ಎಂದು ಹೇಳಿದ್ದರು.
ಈಶಾನ್ಯ ಭಾರತ: ಅವಕಾಶಗಳ ಸುರಿಮಳೆ
2019-20 ರ ಕೈಮಗ್ಗ ಜನಗಣತಿಯ ಪ್ರಕಾರ ದೇಶದ ಒಟ್ಟು ಕೈಮಗ್ಗ ಕಾರ್ಮಿಕರಲ್ಲಿ ಸುಮಾರು ಶೇ. 52 ರಷ್ಟು ಜನರು ಈಶಾನ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅಸ್ಸಾಂ 12.83 ಲಕ್ಷಕ್ಕೂ ಅಧಿಕ ನೇಕಾರರು ಮತ್ತು 12.46 ಲಕ್ಷ ಮಗ್ಗಗಳೊಂದಿಗೆ ದೇಶದಲ್ಲೇ ಮುಂಚೂಣಿಯಲ್ಲಿದೆ. "ಅಸ್ಸಾಂನ ಮ್ಯಾಂಚೆಸ್ಟರ್" ಎಂದು ಕರೆಯಲ್ಪಡುವ ಸುವಾಲ್ಕುಚಿ ಸಾಂಪ್ರದಾಯಿಕ ನೇಯ್ಗೆ ಶ್ರೇಷ್ಠತೆಗೆ ಸಾಕ್ಷಿಯಾಗಿದೆ, ಆದರೆ ಧೇಮಾಜಿ ಜಿಲ್ಲೆಯ ಮಚ್ಖೋವಾದಂತಹ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದರಿಂದ ಈ ವಲಯವನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಕೈಮಗ್ಗಗಳ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿ, ಈಶಾನ್ಯ ರಾಜ್ಯಗಳಿಗಾಗಿ ಕೇಂದ್ರ ಸರ್ಕಾರ ಬದ್ಧತೆಯ ಧ್ಯೇಯವು ಬುಡಕಟ್ಟು ನೇಯ್ಗೆಗಳನ್ನು ಉತ್ತೇಜಿಸುವುದು, ಕೈಮಗ್ಗ ಪ್ರವಾಸೋದ್ಯಮ ಪ್ರೋತ್ಸಾಹಿಸುವುದು, ರಫ್ತುಗಳನ್ನು ಸುಗಮಗೊಳಿಸುವುದು ಮತ್ತು ಯುವಕರಿಗೆ ತರಬೇತಿ ನೀಡುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಈ ಪ್ರದೇಶವನ್ನು ನೈಸರ್ಗಿಕ ನಾರುಗಳು, ಪ್ರಾಚೀನ ಜ್ಞಾನ ಮತ್ತು ಆಧುನಿಕ ಉದ್ಯಮಶೀಲತೆ ಇರುವ ಜಾಗತಿಕ ವಿನ್ಯಾಸ ಕೇಂದ್ರವನ್ನಾಗಿ ಮಾಡಲಾಗುತ್ತಿದೆ.
ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದ (ಎನ್ ಎಚ್ ಪಿ ಡಿ) ಅಡಿಯಲ್ಲಿ, ಈಶಾನ್ಯ ರಾಜ್ಯಗಳ 123 ಸಣ್ಣ ಕ್ಲಸ್ಟರ್ ಗಳಿಗೆ ಆರ್ಥಿಕ ನೆರವು ವಿಸ್ತರಿಸಲಾಗಿದೆ. ಶಿವಸಾಗರ್ನಲ್ಲಿ ಬೃಹತ್ ಕೈಮಗ್ಗ ಕ್ಲಸ್ಟರ್ ಅನ್ನು ಸ್ಥಾಪಿಸಲಾಗಿದೆ ಮತ್ತು ಇಂಫಾಲ್ ಪೂರ್ವ ಮತ್ತು ಸುವಾಲ್ಕುಚಿಯಲ್ಲಿ ಅಂತಹ ಎರಡು ಯೋಜನೆಗಳು ನಡೆಯುತ್ತಿವೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ (ಪಿಎಂಎಸ್ ಬಿವೈ) ಅಡಿಯಲ್ಲಿ ಈ ಪ್ರದೇಶದಲ್ಲಿ ಸುಮಾರು 3.08 ಲಕ್ಷ ನೇಕಾರರು ಸಾರ್ವತ್ರಿಕ ಮತ್ತು ಕೈಗೆಟುಕುವ ಸಾಮಾಜಿಕ ಭದ್ರತೆಗಾಗಿ ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ ಅಸ್ಸಾಂನ 1.09 ಲಕ್ಷ ಜನರೂ ಸೇರಿದ್ದಾರೆ.
ಪುನಃಶ್ಚೇತನದಿಂದ ಪುನರುಜ್ಜೀವನ
ಕಳೆದ 11 ವರ್ಷಗಳಲ್ಲಿ, ಭಾರತವು ಜವಳಿ ಸಚಿವಾಲಯದ ನಿರ್ದಿಷ್ಠ ಮಧ್ಯಸ್ಥಿಕೆಗಳಿಂದಾಗಿ ಕೈಮಗ್ಗ ವಲಯದಲ್ಲಿ ಗಣನೀಯ ಪುನರುಜ್ಜೀವನ ಕಂಡಿದೆ. ಕ್ಲಸ್ಟರ್ ಅಭಿವೃದ್ಧಿ ಉಪಕ್ರಮಗಳು, ಆಧುನಿಕ ಸಾಧನಗಳು ಮತ್ತು ಸಾಲದ ಸುಲಭ ಲಭ್ಯತೆಯು ಮನೆಯ ಚಟುವಟಿಕೆಗಳಿಂದ ನೇಯ್ಗೆಯನ್ನು ಸಣ್ಣ ಉದ್ಯಮಗಳಾಗಿ ಪರಿವರ್ತಿಸಲು ಸಹಕಾರಿಯಾಗಿದೆ.
ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (ಎನ್ ಎಚ್ ಡಿ ಪಿ) ಮತ್ತು ಕಚ್ಚಾ ಸಾಮಗ್ರಿಗಳ ಸರಬರಾಜು ಯೋಜನೆ (ಆರ್ ಎಂಎಸ್ ಎಸ್) ನೂಲು ಪೂರೈಕೆ, ಮಗ್ಗಗಳ ಉನ್ನತೀಕರಣ, ಕೆಲಸದ ಶೆಡ್ಗಳ ನಿರ್ಮಾಣದಿಂದ ಹಿಡಿದು ಆಧುನಿಕ ಉಪಕರಣಗಳ ಲಭ್ಯತೆಗೆ ಅವಕಾಶ ನೀಡಿರುವುದರಿಂದ ಆರಂಭದಿಂದ ಕೊನೆಯಯವರಿಗೆ ಸಹಾಯವನ್ನು ಖಾತ್ರಿಪಡಿಸಿದೆ. ಪಿಎಂಜೆಜೆಬಿವೈ ಮತ್ತು ಪಿಎಂಎಸ್ ಬಿವೈ ನಂತಹ ಯೋಜನೆಗಳು ಹೆಚ್ಚು ಅಗತ್ಯವಿರುವ ಹಣಕಾಸು ಮತ್ತು ಸಾಮಾಜಿಕ ಸುರಕ್ಷತಾ ಜಾಲಗಳನ್ನು ಒದಗಿಸುತ್ತಿವೆ. ಮುದ್ರಾ ಯೋಜನೆಯಡಿಯಲ್ಲಿ ರಿಯಾಯಿತಿ ಸಾಲ ಮತ್ತು ಮಾರ್ಜಿನ್ ಮನಿ(ಮೂಲ ನಿಧಿಗೆ) ನೆರವು ದುಡಿಯುವ ಬಂಡವಾಳ ಲಭ್ಯತೆಯನ್ನು ಹೆಚ್ಚಿಸಿವೆ.
ನೇಕಾರರು ಮತ್ತು ಉದ್ಯಮಿಗಳಿಗೆ ವೆಚ್ಚಗಳನ್ನು ತಗ್ಗಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು, ಹೆಚ್ಚಿನ ಸಾಮರ್ಥ್ಯದ ಪ್ರದೇಶಗಳಲ್ಲಿ ಕೈಮಗ್ಗ ಪಾರ್ಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಯೋಜಿತ ಸ್ಥಳಗಳಲ್ಲಿ ಡೈಯಿಂಗ್ ಘಟಕಗಳು, ಪ್ಲಗ್-ಅಂಡ್-ಪ್ಲೇ ಕಾರ್ಯಾಗಾರಗಳು, ಡಿಜಿಟಲ್ ಲ್ಯಾಬ್ಗಳು, ಶೋರೂಮ್ಗಳು ಮತ್ತು ಸೌರಶಕ್ತಿ ಮತ್ತು ತ್ಯಾಜ್ಯ ಮರುಬಳಕೆಯಂತಹ ಸುಸ್ಥಿರತೆಯ ಮೂಲಸೌಕರ್ಯವೂ ಸಹ ಒಳಗೊಂಡಿರುತ್ತವೆ.
ಅದೇ ಸಮಯದಲ್ಲಿ, ಎನ್ ಐಎಫ್ ಟಿ, ಎನ್ ಐಡಿ ಮತ್ತು ಇತರ ವಿನ್ಯಾಸ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ವಿನ್ಯಾಸ ಮತ್ತು ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ, ಅಲ್ಲಿ ವಿನ್ಯಾಸಕರು ಮತ್ತು ನೇಕಾರರು ನೇಯ್ಗೆಯ ಸಾಂಪ್ರದಾಯಿಕ ಸಾರವನ್ನು ಸಹ ರಚಿಸುತ್ತಾರೆ, ಸಂರಕ್ಷಿಸುತ್ತಾರೆ ಮತ್ತು ದಾಖಲಿಸುತ್ತಾರೆ ಮತ್ತು ಸಾಂಸ್ಕೃತಿಕ ವಿನ್ಯಾಸಗಳನ್ನು ಆನ್ಲೈನ್ನಲ್ಲಿ ಸಂಗ್ರಹಿಸಿಡುತ್ತಾರೆ. ಈ ಮಧ್ಯಸ್ಥಿಕೆಗಳು ಭಾರತೀಯ ಕೈಮಗ್ಗದ ಸೌಂದರ್ಯ ಮತ್ತು ವಾಣಿಜ್ಯ ಆಕರ್ಷಣೆಯನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಿಸುವ ಭರವಸೆ ನೀಡುತ್ತಿವೆ.
ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆದರೆ ಕೈಮಗ್ಗದ ಆತ್ಮವು ಹಾಗೇಯೇ ಇರಬೇಕು. ಕೃತಕ ಬುದ್ಧಿಮತ್ತೆ (ಎಐ) ಅನ್ನು ಈಗ ಪ್ರವೃತ್ತಿ ಮುನ್ಸೂಚನೆ ಮತ್ತು ಡಿಜಿಟಲ್ ಬಣ್ಣ ಆಯ್ಕೆಗಾಗಿ ಬಳಸಲಾಗುತ್ತದೆ, ಆದರೆ ಬ್ಲಾಕ್ಚೈನ್ ಉತ್ಪನ್ನ ಪತ್ತೆಹಚ್ಚುವಿಕೆಯನ್ನು ಖಾತ್ರಿಪಡಿಸುತ್ತದೆ ಮತ್ತು ನಕಲಿ ಮಾಡುವುದನ್ನು ತಡೆಯುತ್ತದೆ, ಇದರಿಂದಾಗಿ ವಲಯವು ಜವಾಬ್ದಾರಿಯುತವಾಗಿ ಹೊಸ ಡಿಜಿಟಲ್ ಯುಗವನ್ನು ಪ್ರವೇಶಿಸುತ್ತದೆ.
ಸಂಪರ್ಕಗಳನ್ನು ಮರುರೂಪಿಸುವುದು: ಇ-ವಾಣಿಜ್ಯ ಮತ್ತು ಮಾರುಕಟ್ಟೆ ಲಭ್ಯತೆ
ಮಾರ್ಕೆಟಿಂಗ್ ಮತ್ತು ಇ-ವಾಣಿಜ್ಯವು ಪಥ ಪರಿವರ್ತಕಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯತಂತ್ರವು ಸರಳ ಆದರೆ ಕ್ರಾಂತಿಕಾರಿಯಾಗಿದೆ: ಮಧ್ಯವರ್ತಿಗಳನ್ನು ತೊಡೆದುಹಾಕುವುದು, ಪ್ರಚಾರದ ಮೂಲಕ ಗೋಚರತೆಯನ್ನು ಹೆಚ್ಚಿಸುವುದು ಮತ್ತು ನೇಕಾರರನ್ನು ಮೊದಲ ಬಾರಿಗೆ ವೇದಿಕೆಗಳು, ಪ್ರದರ್ಶನಗಳು ಮತ್ತು ಮಾರುಕಟ್ಟೆಗಳಿಗೆ ನೇರವಾಗಿ ಸಂಪರ್ಕಿಸುವ ಕೆಲಸಗಳಾಗುತ್ತಿವೆ. ಅದಕ್ಕೆ ಅನುಗುಣವಾಗಿ, ಕೈಮಗ್ಗ ನೇಕಾರರನ್ನು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ (ಜೆಮ್) ನಲ್ಲಿ ಸೇರಿಸಿಕೊಳ್ಳಲಾಗುತ್ತಿದೆ ಮತ್ತು indiahandmade.com ನ್ಯಾಯಯುತ ನ್ಯಾಯಯುತ ಸಂಭಾವನೆ, ಉಚಿತ ಸಾಗಾಣೆ, ಸುಲಭ ಆದಾಯ ಮತ್ತು ಸುರಕ್ಷಿತ ಪಾವತಿ ಆಯ್ಕೆಗಳನ್ನು ಖಾತ್ರಿಪಡಿಸುವ ಪಾರದರ್ಶಕ, ಶೂನ್ಯ ಕಮಿಷನ್ ವೇದಿಕೆಯನ್ನು ಒದಗಿಸುತ್ತಿದೆ.
ಈ ಪ್ರಯತ್ನಗಳನ್ನು ಶ್ಲಾಘಿಸುತ್ತಾ, 106 ಕೈಮಗ್ಗ ಉತ್ಪನ್ನಗಳಿಗೆ ಈಗಾಗಲೇ ಜಿಐ ಟ್ಯಾಗ್ಗಳನ್ನು ನೀಡಲಾಗಿದೆ, ಅವುಗಳ ವಿಶಿಷ್ಟ ಪ್ರಾದೇಶಿಕ ಪರಂಪರೆ ಮತ್ತು ಕರಕುಶಲತೆಯಿಂದಾಗಿ ಹೆಸರುವಾಸಿಯಾಗಿವೆ. 'ಕೈಮಗ್ಗ ಗುರುತು' ಮತ್ತು 'ಭಾರತ ಕೈಮಗ್ಗ ಬ್ರಾಂಡ್' ಜೊತೆಗೆ, ಈ ಕ್ರಮಗಳು ಕೈಮಗ್ಗ ಉತ್ಪನ್ನಗಳ ವಿಶಿಷ್ಟ ಗುರುತನ್ನು ಬಲಪಡಿ ಸುತ್ತವೆ, ಖರೀದಿದಾರರಿಗೆ ಅವುಗಳ ದೃಢತೆ, ಗುಣಮಟ್ಟ ಮತ್ತು ಪರಿಸರ ಸ್ನೇಹಿ ಸ್ವಭಾವವನ್ನು ಖಾತ್ರಿಪಡಿಸುತ್ತವೆ.
ಕೌಶಲ್ಯ, ಭದ್ರತೆ ಮತ್ತು ಸುಸ್ಥಿರತೆ
ಭವಿಷ್ಯವು ಅಂತರ್ಗತ ಸಾಮರ್ಥ್ಯ ನಿರ್ಮಾಣದ ಮೇಲೆ ನಿಂತಿದೆ. ಯುವಕರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ವಿಶೇಷವಾಗಿ ಸಾಂಪ್ರದಾಯಿಕ ಕಾರ್ಯವಿಧಾನಗಳನ್ನು ಸಂರಕ್ಷಿಸುವಲ್ಲಿ, ಆರೋಗ್ಯ ವಿಮೆ, ಶೈಕ್ಷಣಿಕ ವಿದ್ಯಾರ್ಥಿ ವೇತನಗಳು ಮತ್ತು ನೇಕಾರರಿಗೆ ಪಿಂಚಣಿ ಪ್ರಯೋಜನಗಳನ್ನು ಒಳಗೊಂಡಂತೆ ಹಣಕಾಸು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಸಂಯೋಜಿಸಲಾಗಿದೆ.
ಅದೇ ವೇಳೆ, ಪರಿಸರ ಸ್ನೇಹಿ ಬಣ್ಣಗಳು, ಇಂಗಾಲ-ತಟಸ್ಥ ಉತ್ಪಾದನಾ ಮಾದರಿಗಳು ಮತ್ತು ಜೀವನಚಕ್ರ ಮೌಲ್ಯ ಮಾಪನಗಳು ಸುಸ್ಥಿರತೆಗೆ ವಲಯದ ಬದ್ಧತೆಯನ್ನು ಬಲಪಡಿಸುತ್ತವೆ, ಭಾರತೀಯ ಕೈಮಗ್ಗಗಳನ್ನು ಜಾಗತಿಕ ಹಸಿರು ಚಳವಳಿಯೊಂದಿಗೆ ಸಂಯೋಜಿಸುತ್ತವೆ. ಐಐಟಿ ದೆಹಲಿಯು ಜವಳಿ ಸಚಿವಾಲಯದ ಸಹಯೋಗದೊಂದಿಗೆ ನಡೆಸಿದ "ಭಾರತೀಯ ಕೈಮಗ್ಗ ವಲಯದಲ್ಲಿ ಕಾರ್ಬನ್ ಹೆಜ್ಜೆ ಗುರುತು ಮೌಲ್ಯಮಾಪನ: ವಿಧಾನಗಳು ಮತ್ತು ಪ್ರಕರಣ ಅಧ್ಯಯನಗಳು" ಎಂಬ ಹೊಸ ವರದಿಯು ಉಲ್ಲೇಖ ಮತ್ತು ಮಾರ್ಗದರ್ಶಿ ಪುಸ್ತಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಭಾರತದ ಹೆಚ್ಚು ಸುಸ್ಥಿರ ಆವೃತ್ತಿಗೆ ದಾರಿ ಮಾಡಿಕೊಡುತ್ತದೆ. ಸಾಂಪ್ರದಾಯಿಕ ಕೈಮಗ್ಗ ಪದ್ಧತಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಅಳವಡಿಸುವ ಮೂಲಕ, ಈ ಅಧ್ಯಯನವು ಜವಳಿ ಸಚಿವಾಲಯದ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್ ಡಿಜಿಗಳಿಗೆ) ಬದ್ಧತೆಯನ್ನು ಬಲಪಡಿಸುತ್ತದೆ. ಕೈಮಗ್ಗ ಮೌಲ್ಯ ಸರಣಿಯು ಹವಾಮಾನ-ಚೇತರಿಕೆ ಆಗಿರುವುದಲ್ಲದೆ ನೈತಿಕ ಉತ್ಪಾದನೆ, ಸಮಾನ ವೇತನ ಮತ್ತು ಗೌರವಯುತ ಜೀವನೋಪಾಯದಲ್ಲಿ ಬೇರೂರಿದೆ ಎಂಬುದನ್ನು ಇದು ಖಾತ್ರಿಪಡಿಸುತ್ತದೆ.
ಮುನ್ನೋಟ: ಸುಸ್ಥಿರತೆ, ಬೆಂಬಲ ಮತ್ತು ವ್ಯಾಪ್ತಿ
ಭಾರತದ ಕೈಮಗ್ಗ ವಲಯದ ದೂರದೃಷ್ಟಿಯು ಭಾಗಶಃ ಸಾಂಸ್ಕೃತಿಕ, ಭಾಗಶಃ ಕೃತಕ ಬುದ್ಧಿಮತ್ತೆ ಮತ್ತು ಸಂಪೂರ್ಣ ವಾಗಿ ಮಾನವೀಯವಾಗಿದೆ. ಮಹತ್ವಾಕಾಂಕ್ಷೆಯ ಗುರಿಗಳಲ್ಲಿ ರಫ್ತು ಏರಿಕೆ, ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಕ್ಲಸ್ಟರ್ಗಳಾದ್ಯಂತ ನೇಕಾರರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ಒದಗಿಸುವುದು ಸೇರಿವೆ. ಈ ವಲಯದ ಭವಿಷ್ಯವು ಮೂರು ಸ್ತಂಭಗಳಲ್ಲಿ ನೆಲೆಗೊಂಡಿದೆ; ಆತ್ಮವನ್ನು ಉಳಿಸಿಕೊಳ್ಳುವುದು, ತಯಾರಕರನ್ನು ಬೆಂಬಲಿಸುವುದು ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚಿಸುವುದು.
ಕೂಲಿ ಕಾರ್ಮಿಕರನ್ನು ಮೀರಿ, ಈ ವಲಯವು ಫೆಲೋಶಿಪ್ಗಳು, ನವೋದ್ಯಮ ಅನುದಾನಗಳು ಮತ್ತು ಸಂಪೋಷಣಾ ಕೇಂದ್ರಗಳು (ಇನ್ಕ್ಯುಬೇಶನ್ ಹಬ್ಗಳೊಂದಿಗೆ) ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ, ವಿಶೇಷವಾಗಿ ಯುವ ಮತ್ತು ಮಹಿಳಾ ನಾಯಕರನ್ನು ಪ್ರೋತ್ಸಾಹಿಸುತ್ತದೆ. ಬ್ರ್ಯಾಂಡಿಂಗ್, ಮಾರ್ಗದರ್ಶನ ಮತ್ತು ವ್ಯಾಪಾರ ಅಭಿವೃದ್ಧಿ ಬೆಂಬಲವು ಸಾಂಸ್ಕೃತಿಕವಾಗಿ ಅಧಿಕೃತ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಮಾಲೀಕತ್ವ ಆಧರಿತ ಸಣ್ಣ ಉದ್ಯಮಗಳನ್ನು ಬೆಳೆಸುತ್ತದೆ.
ಭಾರತದ ಕೈಮಗ್ಗ ವಲಯ ನಿರಂತರ ವಿಕಸನ
2047ರ ವೇಳೆಗೆ ವಿಕಸಿತ ಭಾರತದೆಡೆಗಿನ ನಮ್ಮ ಪಯಣದಲ್ಲಿ ಕೈಮಗ್ಗವು ಪ್ರಮುಖ ಚಾಲನಾಶಕ್ತಿಯಾಗಿ ಮುಂದುವರಿಯುತ್ತದೆ ಮತ್ತು ದೇಶದ ಸಾಂಸ್ಕೃತಿಕ ನೀತಿಗಳನ್ನು ಸಂರಕ್ಷಿಸುತ್ತದೆ ಮತ್ತು ಸುಸ್ಥಿರತೆ ಮತ್ತು ಚಿಂತನ ಶೀಲ ಬಳಕೆಯನ್ನು ತರುತ್ತದೆ. ಪ್ರತಿರೋಧದ ಸಾಧನದಿಂದ ನಾವೀನ್ಯತೆಯ ದಾರಿದೀಪಕ್ಕೆ ಪ್ರಯಾಣವು ಮುಂಬ ರುವ ಯುಗಗಳಲ್ಲಿ ಶಾಶ್ವತ ಹೆಜ್ಜೆಗುರುತನ್ನು ಬಿಟ್ಟುಹೋಗುವ ಕೈಮಗ್ಗದ ಕಾಲಾತೀತ ಮಹತ್ವವನ್ನು ವಿವರಿಸುತ್ತದೆ. ಪರಂಪರೆ, ನಾವೀನ್ಯತೆ ಮತ್ತು ಸಾಮೂಹಿಕ ಪ್ರಯತ್ನವನ್ನು ಒಟ್ಟಿಗೆ ಬೆಸೆಯುವ ಮೂಲಕ, ಭಾರತದ ಕೈಮಗ್ಗ ವಲಯವು ಮನೆಯಲ್ಲಿ ಲಕ್ಷಾಂತರ ಜನರನ್ನು ಸಬಲೀಕರಣಗೊಳಿಸುವಾಗ ಜಗತ್ತಿಗೆ ಸ್ಫೂರ್ತಿ ನೀಡಲು ಸಜ್ಜಾಗಿದೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯಂತೆ "ಕೈಮಗ್ಗಗಳನ್ನು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿಸೋಣ ಮತ್ತು ನಮ್ಮ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳಿಗೆ ಯೋಗ್ಯವಾದ ಸ್ಥಾನಮಾನವನ್ನು ನೀಡೋಣ”.
-ಪಬಿತ್ರ ಮಾರ್ಗರಿಟಾ (ಜವಳಿ ಖಾತೆ ರಾಜ್ಯ ಸಚಿವ)
(11ನೇ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಬರೆದಿರುವ ಲೇಖನ)







