ನಿಜ್ಜರ್ ಹತ್ಯೆಯಲ್ಲಿ ‘ಭಾರತದ ನಂಟು’ ಕುರಿತು ಗುಪ್ತಚರ ಮಾಹಿತಿಯನ್ನು ಕೆನಡಾಕ್ಕೆ ಹಸ್ತಾಂತರಿಸಿದ್ದ ಬ್ರಿಟನ್ : ವರದಿ

ಹರ್ದೀಪ್ ಸಿಂಗ್ ನಿಜ್ಜರ್ | Photo Credit : Facebook
ಲಂಡನ್,ನ.9: ಬ್ರಿಟಿಷ್ ಗುಪ್ತಚರರು ಕದ್ದಾಲಿಸಿದ್ದ ದೂರವಾಣಿ ಕರೆಗಳು 2023ರಲ್ಲಿ ನಡೆದಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಭಾರತಕ್ಕೂ ಸಂಬಂಧವಿದೆ ಎಂಬ ನಿರ್ಧಾರಕ್ಕೆ ಬರಲು ಕೆನಡಾದ ಅಧಿಕಾರಿಗಳಿಗೆ ನೆರವಾಗಿದ್ದವು ಎಂದು ಈ ವಾರ ಬಿಡುಗಡೆಗೊಂಡಿರುವ ನೂತನ ಸಾಕ್ಷ್ಯಚಿತ್ರವೊಂದು ಪ್ರತಿಪಾದಿಸಿದೆ ಎಂದು indiatoday ವರದಿ ಮಾಡಿದೆ.
‘ಬ್ಲೂಮ್ಬರ್ಗ್ ಒರಿಜಿನಲ್ಸ್’ನ ‘ಇನ್ಸೈಡ್ ದಿ ಡೆತ್ಸ್ ದಟ್ ರಾಕ್ಡ್ ಇಂಡಿಯಾಸ್ ರಿಲೇಷನ್ಸ್ ವಿಥ್ ದಿ ವೆಸ್ಟ್ (ಪಾಶ್ಚಾತ್ಯ ದೇಶಗಳೊಂದಿಗೆ ಭಾರತದ ಸಂಬಂಧಗಳನ್ನು ಕದಡಿದ ಸಾವುಗಳ ಒಳನೋಟ)’ ಸಾಕ್ಷ್ಯಚಿತ್ರದ ಪ್ರಕಾರ ಬ್ರಿಟನ್ ಸರಕಾರಿ ಸಂವಹನ ಪ್ರಧಾನ ಕಚೇರಿ (ಜಿಸಿಎಚ್ಕ್ಯು) ಎಂದು ನಂಬಲಾಗಿರುವ ಬ್ರಿಟಿಷ್ ಗುಪ್ತಚರ ಸಂಸ್ಥೆಯು ಮೂರು ಗುರಿಗಳ ಬಗ್ಗೆ ಚರ್ಚಿಸುತ್ತಿರುವಂತೆ ಕಂಡು ಬಂದಿದ್ದ ಕರೆಗಳನ್ನು ಕದ್ದಾಲಿಸಿತ್ತು.
ಭಾರತವು 2020ರಲ್ಲಿ ಖಾಲಿಸ್ತಾನಿ ಪರ ಚುಟುವಟಿಕೆಗೆ ಸಂಬಂಧಿಸಿ ಕೆನಡಾದ ಸಿಖ್ ಪ್ರಜೆ ನಿಜ್ಜರ್ನನ್ನು ಹೆಸರಿಸಿತ್ತು. ಬ್ರಿಟನ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲಂಡ್ ನಡುವೆ ಗುಪ್ತಚರ ಮಾಹಿತಿ ಹಂಚಿಕೆ ಒಪ್ಪಂದ ‘ಫೈವ್ ಆಯ್ಸ್’ನಡಿ ಕೆನಡಾಕ್ಕೆ ರವಾನಿಸಲಾದ ಗುಪ್ತಚರ ಮಾಹಿತಿಗಳಲ್ಲಿಯ ಹೆಸರುಗಳಲ್ಲಿ ನಿಜ್ಜರ್ ಸೇರಿದ್ದಾನೆ ಎಂದು ಹೇಳಲಾಗಿದೆ.
2023ರ ಜುಲೈ ಉತ್ತರಾರ್ಧದಲ್ಲಿ ಬ್ರಿಟನ್ಗೆ ‘ಸಂಬಂಧಿತ ಮಾಹಿತಿ’ ಲಭ್ಯವಾದಾಗ ನಿಜ್ಜರ್ ಕೊಲೆ ಪ್ರಕರಣದ ತನಿಖೆಯಲ್ಲಿ ‘ಮಹತ್ವದ ಪ್ರಗತಿ’ ಕಂಡು ಬಂದಿತ್ತು ಎಂದು ವೀಡಿಯೊ ಸಾಕ್ಷ್ಯಚಿತ್ರವು ಹೇಳಿಕೊಂಡಿದೆ.
ಕೆನಡಾ ಸರಕಾರಕ್ಕೆ ಖುದ್ದಾಗಿ ಹಸ್ತಾಂತರಿಸಲಾಗುವ ಮಾಹಿತಿಯನ್ನು ವಿದ್ಯುನ್ಮಾನ ವ್ಯವಸ್ಥೆಗಳಿಂದ ದೂರವಿರಿಸಬೇಕು ಮತ್ತು ಬ್ರಿಟನ್ ಸರಕಾರದಿಂದ ಪೂರ್ವಾನುಮೋದನೆ ಪಡೆದ ಕೆನಡಾದ ಕೆಲವೇ ಅಧಿಕಾರಿಗಳು ಮಾತ್ರ ಅದನ್ನು ನೋಡಬಹುದು ಎಂಬ ಕಟ್ಟುನಿಟ್ಟಿನ ಷರತ್ತುಗಳಡಿಯಲ್ಲಿ ಮಾತ್ರ ಬ್ರಿಟಿಷ್ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ.
ಭಾರತ ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ವಿಶ್ಲೇಷಕರು ನಂಬಿರುವ ವ್ಯಕ್ತಿಗಳ ನಡುವಿನ ಸಂಭಾಷಣೆಗಳನ್ನು ಬ್ರಿಟಿಷ್ ಗುಪ್ತಚರ ಸಂಸ್ಥೆಯು ಕದ್ದಾಲಿಸಿತ್ತು ಮತ್ತು ಕಡತವು ಈ ಸಂಭಾಷಣೆಗಳ ಸಾರಾಂಶವಾಗಿದೆ ಎಂದು ಸಾಕ್ಷ್ಯಚಿತ್ರವು ಹೇಳಿದೆ.
ಅವರು ಮೂರು ಸಂಭಾವ್ಯ ಗುರಿಗಳ ಬಗ್ಗೆ ಚರ್ಚಿಸಿದ್ದರು; ನಿಜ್ಜರ್, ಅವತಾರ ಸಿಂಗ್ ಖಂಡಾ ಮತ್ತು ಗುರುಪತ್ವಂತ್ ಸಿಂಗ್ ಪನ್ನುನ್. ಬಳಿಕ ನಿಜ್ಜರ್ನನ್ನು ಹೇಗೆ ಯಶಸ್ವಿಯಾಗಿ ಹತ್ಯೆ ಮಾಡಲಾಯಿತು ಎಂಬ ಬಗ್ಗೆ ಸಂಭಾಷಣೆ ನಡೆದಿತ್ತು ಎಂದು ಸಾಕ್ಷ್ಯಚಿತ್ರವು ಆರೋಪಿಸಿದೆ.
ಖಾಲಿಸ್ತಾನಿ ಬೆಂಬಲಿಗನಾಗಿದ್ದ ಬ್ರಿಟಿಷ್ ಸಿಖ್ ಖಂಡಾ ಜೂನ್ 2023ರಲ್ಲಿ ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿಯ ಆಸ್ಪತ್ರೆಯೊಂದರಲ್ಲಿ ನಿಧನನಾಗಿದ್ದಾನೆ. ಆತ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮತ್ತು ಬ್ರಿಟನ್ನಲ್ಲಿಯ ಕೆಲವು ಗುಂಪುಗಳಿಂದ ಆರೋಪಗಳ ಹೊರತಾಗಿಯೂ ಆತನ ಸಾವಿನ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದು ಬ್ರಿಟಿಷ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ಸಿಖ್ ಫೆಡರೇಷನ್ ಯುಕೆ ತಾನು ಬ್ರಿಟನ್ನ ಭದ್ರತಾ ಸಚಿವ ಡ್ಯಾನ್ ಜಾರ್ವಿಸ್ ಅವರಿಗೆ ಪತ್ರವೊಂದನ್ನು ಬರೆದಿದ್ದು,ಸಿಖ್ ಸಮುದಾಯವನ್ನು ಪ್ರತಿನಿಧಿಸುವ ಸಂಸದರು ನಿರ್ದಿಷ್ಟವಾಗಿ ಕೋರಿದ್ದಾಗ ಬ್ರಿಟಿಷ್ ಸರಕಾರವೇಕೆ ಜುಲೈ 2023ರ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ ಅಥವಾ ಉಲ್ಲೇಖಿಸಿರಲಿಲ್ಲ ಎಂದು ಪ್ರಶ್ನಿಸಿದೆ.
ಖಂಡಾ ನಿಗೂಢ ಸಾವಿಗೆ ಸಂಬಂಧಿಸಿದಂತೆ ಬ್ರಿಟಿಷ್ ಗುಪ್ತಚರ ಸಂಸ್ಥೆ ಹೊಂದಿದ್ದ ಮಾಹಿತಿ ಬಗ್ಗೆ ನಾವು ವಿಶೇಷವಾಗಿ ಕಳವಳಗೊಂಡಿದ್ದೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಖಾಲಿಸ್ತಾನಿ ಪರ ಚಟುವಟಿಕೆಗೆ ಸಂಬಂಧಿಸಿ ಭಾರತದಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟಿರುವ ಅಮೆರಿಕದ ಪ್ರಜೆ ಪನ್ನುನ್ ಸಂದರ್ಶನವನ್ನೂ ಬ್ಲೂಮ್ಬರ್ಗ್ ಸಾಕ್ಷ್ಯಚಿತ್ರವು ಒಳಗೊಂಡಿದೆ. ಅದರಲ್ಲಿ ಸಶಸ್ತ್ರ ಅಂಗರಕ್ಷಕರಿಂದ ಸುತ್ತುವರಿಯಲ್ಪಟ್ಟಿರುವ ಆತ ತನಗೆ ಜೀವಭಯವಿದೆ ಎಂದು ಹೇಳಿಕೊಂಡಿದ್ದಾನೆ.
ಕೆನಡಾದ ಆರೋಪಗಳನ್ನು ‘ಅಸಂಬಂದ್ಧ ಮತ್ತು ಪ್ರೇರಿತ’ ಎಂದು ಬಲವಾಗಿ ತಿರಸ್ಕರಿಸಿರುವ ಭಾರತವು, ಇದು ರಾಜಕೀಯ ಲಾಭಕ್ಕಾಗಿ ದೇಶಕ್ಕೆ ಕಳಂಕವನ್ನುಂಟು ಮಾಡುವ ಉದ್ದೇಶಪೂರ್ವಕ ತಂತ್ರ ಎಂದು ಹೇಳಿದೆ.







