ಹರೇ ಕೃಷ್ಣ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Photo credit: PTI
ಬೆಂಗಳೂರು : ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ದೀರ್ಘ ಕಾಲದ ವಿವಾದವೊಂದು ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥವಾಗಿದೆ.
ಇಸ್ಕಾನ್ ಮುಂಬೈ ಪರವಾಗಿ ನೀಡಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದೆ ಎಂದು ಶುಕ್ರವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಾಸಿಹ್ ಅವರ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಾಲಯ ಮತ್ತು ಶೈಕ್ಷಣಿಕ ಸಂಕೀರ್ಣದ ನಿಯಂತ್ರಣದ ಕುರಿತು ಇಸ್ಕಾನ್ ಮುಂಬೈ ಪರವಾಗಿ 2011ರ ಮೇ 23ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
ಸ್ಥಳೀಯ ನ್ಯಾಯಾಲಯ ಈ ಮೊದಲು ಇಸ್ಕಾನ್ ಬೆಂಗಳೂರಿನ ಪರವಾಗಿ ತೀರ್ಪು ನೀಡಿತ್ತು. ಆದರೆ, ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತು. ಸ್ಥಳೀಯ ನ್ಯಾಯಾಲಯ 2009ರಲ್ಲಿ ನೀಡಿದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಪರವಾಗಿ ಸಂಸ್ಥೆಯ ಪ್ರತಿನಿಧಿ ದಾಸ ಅವರು ಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕದ ನೋಂದಾಯಿತ ಸಮಾಜವಾದ ಇಸ್ಕಾನ್ ಬೆಂಗಳೂರು, ದಶಕಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬೆಂಗಳೂರಿನಲ್ಲಿ ದೇವಾಲಯವನ್ನು ನಿರ್ವಹಿಸುತ್ತಿದೆ ಎಂದು ಕೋರ್ಟ್ನಲ್ಲಿ ವಾದಿಸಿದೆ.
1860ರ ರಾಷ್ಟ್ರೀಯ ಸಂಘಗಳ ನೋಂದಣಿ ಕಾಯ್ದೆ ಮತ್ತು ಬಾಂಬೆ ಸಾರ್ವಜನಿಕ ಟ್ರಸ್ಟ್ ಕಾಯ್ದೆ-1950ರ ಅಡಿಯಲ್ಲಿ ನೋಂದಾಯಿಸಲಾದ ಇಸ್ಕಾನ್ ಮುಂಬೈ, ಇಸ್ಕಾನ್ ಬೆಂಗಳೂರು ಕೇವಲ ತನ್ನ ಶಾಖೆಯಾಗಿದೆ ಮತ್ತು ಪ್ರಶ್ನಾರ್ಹ ಆಸ್ತಿಯು ತನ್ನ ವ್ಯಾಪ್ತಿಗೆ ಸೇರಿದೆ ಎಂದು ವಾದಿಸಿತ್ತು.







