ಹಣ ಅಕ್ರಮ ವರ್ಗಾವಣೆ ಪ್ರಕರಣ: ಹರ್ಯಾಣದ ಮಾಜಿ ಕಾಂಗ್ರೆಸ್ ಶಾಸಕ ಧರಂ ಸಿಂಗ್ ಛೋಕರ್ ಬಂಧನ

Former Haryana Congress MLA Dharam Singh ChhokerPhoto | ANI
ಚಂಡಿಗಢ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಹರ್ಯಾಣದ ಮಾಜಿ ಕಾಂಗ್ರೆಸ್ ಶಾಸಕ ಧರಂ ಸಿಂಗ್ ಛೋಕರ್ರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ.
ದಿಲ್ಲಿಯ ಹೊಟೇಲ್ನಿಂದ ಧರಂ ಸಿಂಗ್ ಛೋಕರ್ರನ್ನು ರವಿವಾರ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಛೋಕರ್, ಅವರ ಪುತ್ರರಾದ ಸಿಖಂದರ್ ಛೋಕರ್ ಹಾಗೂ ವಿಕಾಸ್ ಛೋಕರ್ ನಕಲಿ ಹಾಗೂ ವಂಚನೆ ಆರೋಪ ಎದುರಿಸುತ್ತಿದ್ದಾರೆ.
ಕೈಗೆಟಕುವ ವಸತಿ ಯೋಜನೆ ಅಡಿಯಲ್ಲಿ ಮನೆ ಖರೀದಿಸಿದ ಸುಮಾರು 1500 ಜನರಿಂದ ಛೋಕರ್ ಹಾಗೂ ಅವರ ಪುತ್ರರ ಕಂಪೆನಿಗಳು ಕೋಟ್ಯಂತರ ರೂಪಾಯಿ ಸಂಗ್ರಹಿಸಿವೆ. ಗುರುಗ್ರಾಮದ ಸೆಕ್ಟರ್ 68ರಲ್ಲಿ ಮನೆಗಳನ್ನು ಒದಗಿಸುವ ಭರವಸೆಯನ್ನು ಈ ಯೋಜನೆ ನೀಡಿತ್ತು. ಈ ಯೋಜನೆ 2022ರ ಒಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಇಂದಿಗೂ ಪೂರ್ಣಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ನಿರ್ಮಾಣಕ್ಕೆ ಗುತ್ತಿಗೆ ಪಡೆದುಕೊಂಡ ಕಂಪೆನಿಗಳು ಹೂಡಿಕೆದಾರರ 616 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಬೇರೆಡೆಗೆ ವರ್ಗಾಯಿಸಿವೆ ಎಂದು ಆರೋಪಿಸಲಾಗಿದೆ. ಮನೆ ಖರೀದಿದಾರರು ಛೋಕರ್ ಹಾಗೂ ಅವರ ಪುತ್ರರ ಕಂಪೆನಿ ಮಹಿರಾ ಸಮೂಹದ ವಿರುದ್ಧ ಪ್ರತಿಭಟನೆ ನಡೆಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಿಖಂದರ್ ಛೋಕರ್ನನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರು ಈಗ ಜಾಮೀನಿನಲ್ಲಿ ಇದ್ದಾರೆ. ವಿಕಾಸ್ ಛೋಕರ್ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಯಿ ಐನಾ ಫಾರ್ಮ್ಸ್ ಹಾಗೂ ಸಂಬಂಧಿತ ಕಂಪೆನಿಗಳ ವಿರುದ್ಧ ಗುರುಗ್ರಾಮ ಪೊಲೀಸರು 2023ರದಲ್ಲಿ ದಾಖಲಿಸಿದ ಎಫ್ಐಆರ್ ಈ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಮೂಲವಾಗಿದೆ.







