Haryana | ಚರ್ಚ್ ನಿರ್ಮಾಣಕ್ಕೆ ವಿರೋಧ: ಸಂಘ ಪರಿವಾರದ ನಾಯಕರ ಉಪಸ್ಥಿತಿಯಲ್ಲಿ ಮಹಾ ಪಂಚಾಯತ್

ಸಾಂದರ್ಭಿಕ ಚಿತ್ರ | Photo Credit : PTI
ಗುರುಗ್ರಾಮ: ಎರಡು ಎಕರೆ ಕೃಷಿ ಭೂಮಿಯಲ್ಲಿ ನಡೆಯುತ್ತಿರುವ ಚರ್ಚ್ ನಿರ್ಮಾಣವನ್ನು ವಿರೋಧಿಸಿ ಶುಕ್ರವಾರ ವಿವಿಧ ಗ್ರಾಮದ ಗ್ರಾಮಸ್ಥರು ‘ಮಹಾಪಂಚಾಯತ್’ ನಡೆಸಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಈ ಪಂಚಾಯತಿಯಲ್ಲಿ VHP ಹಾಗೂ ಬಜರಂಗ ದಳ ಸೇರಿದಂತೆ ಹಿಂದೂ ಪರ ಸಂಘಟನೆಗಳ ಹಲವಾರು ನಾಯಕರು ಭಾಗವಹಿಸಿದ್ದರು ಎನ್ನಲಾಗಿದೆ.
ಈ ಚರ್ಚ್ ಧಾರ್ಮಿಕ ಮತಾಂತರದ ಚಟುವಟಿಕೆಗೆ ಕಾರಣವಾಗಬಹುದು ಎಂದು ಟೀಕ್ಲಿ ಮತ್ತು ನೆರೆಯ ಗ್ರಾಮದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಟೀಕ್ಲಿ ಗ್ರಾಮದ ಮುಖ್ಯಸ್ಥ ಸಂದೀಪ್ ಕುಮಾರ್, “ಕ್ರಿಶ್ಚಿಯನ್ ಸಮುದಾಯದ ಕೆಲವು ಸದಸ್ಯರು ಗ್ರಾಮದ ರೈತರೊಬ್ಬರಿಂದ ಭೂಮಿ ಖರೀದಿಸಿ, ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾಗೊಂಡಿತ್ತು” ಎಂದು ತಿಳಿಸಿದ್ದಾರೆ.
“ಆ ವೇಳೆ ನಾವು ಯಾವುದೇ ಚರ್ಚ್ ನಿರ್ಮಾಣ ಮಾಡುವುದಿಲ್ಲವೆಂದು ನಮಗೆ ಭರವಸೆ ನೀಡಿದ್ದರು. ಆದರೆ, ಅವರು ಹೇಗೋ ಭೂಪರಿವರ್ತನೆಗೆ ಅನುಮತಿ ಪಡೆದಿದ್ದು, ಚರ್ಚ್ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ. ಆದರೆ, ನಮ್ಮ ಗ್ರಾಮದಲ್ಲಿ ಯಾವುದೇ ಚರ್ಚ್ ನಿರ್ಮಾಣಗೊಳ್ಳಪಲು ನಾವು ಅವಕಾಶ ನೀಡುವುದಿಲ್ಲ” ಎಂದು ಅವರು ಘೋಷಿಸಿದ್ದಾರೆ.
ಮಹಾ ಪಂಚಾಯತ್ ನಲ್ಲಿ 52 ಮಂದಿ ಸದಸ್ಯರ ಸಮಿತಿಯನ್ನೂ ರಚಿಸಲಾಗಿದ್ದು, ಆ ಸಮಿತಿಯು ಸೋಮುವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ, ಮುಖ್ಯಮಂತ್ರಿಗಳನ್ನುದ್ದೇಶಿಸಿ ಮನವಿ ಪತ್ರ ನೀಡಲು ನಿರ್ಧರಿಸಿದೆ. ಈ ಮಹಾ ಪಂಚಾಯತ್ ನಲ್ಲಿ ನೂರ್ ಪುರ್, ಅಕ್ಲಿಂಪುರ್, ಬಾದ್ ಶಾ ಪುರ್, ಪಲ್ರ, ಗೈರತ್ ಪುರ್ ಬಸ್ ಮತ್ತು ಖೇರ್ಕಿ ಬಘ್ನಿಕಿ ಗ್ರಾಮಗಳ ಜನರು ಭಾಗವಹಿಸಿದ್ದರು. ಈ ಮಹಾ ಪಂಚಾಯತ್ ನ ಅಧ್ಯ ಕ್ಷತೆಯನ್ನು ಕಿಶೋರ್ ಸಿಂಗ್ ವಹಿಸಿದ್ದರು.
ಸ್ಥಳೀಯ ಗ್ರಾಮಗಳಲ್ಲಿನ 10,000 ಹಿಂದೂ ಕುಟುಂಬಗಳಿಗೆ ಹೋಲಿಸಿದರೆ ಶೇ. ಒಂದಕ್ಕಿಂತ ಕಡಿಮೆ ಇರುವ ಸ್ಥಳೀಯ ಕ್ರಿಶ್ಚಿಯನ್ನರಿಗಾಗಿ ಚರ್ಚ್ ಅನ್ನು ನಿರ್ಮಾಣ ಮಾಡುತ್ತಿರುವ ಔಚಿತ್ಯವನ್ನು ಗ್ರಾಮಸ್ಥರು, VHP ಹಾಗೂ ಬಜರಂಗ ದಳ ನಾಯಕರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಆದರೆ, ಚರ್ಚ್ ನಿರ್ಮಾಣ ಮಾಡುತ್ತಿರುವವರು ಈ ಕುರಿತು ಯಾವುದೇ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.







