ಹರಿಯಾಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆ; ಡಿಜಿಪಿ ವಿರುದ್ಧ ಕಿರುಕುಳ ಆರೋಪ

ವೈ.ಪುರಾಣ್ ಕುಮಾರ್ PC: x.com/CNNnews18
ಚಂಡೀಗಢ: ಐಪಿಎಸ್ ಅಧಿಕಾರಿ ವೈ.ಪುರಾಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧ ಬುಧವಾರ ರಾತ್ರಿ ಹರ್ಯಾಣ ಠಾಣೆಯಲ್ಲಿ ದೂರು ನೀಡಿರುವ ಮೃತ ಅಧಿಕಾರಿಯ ಪತ್ನಿ ಹಾಗೂ ಐಎಎಸ್ ಅಧಿಕಾರಿ ಅಮ್ನೀತ್ ಪಿ.ಕುಮಾರ್ ಎಫ್ಐಆರ್ ನಲ್ಲಿ ಹರಿಯಾಣ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಹಾಗೂ ರೋಹ್ಟಕ್ ಎಸ್ಪಿ ನರೇಂದ್ರ ಬಿಜಾರ್ನಿಯಾ ಅವರ ಹೆಸರು ಉಲ್ಲೇಖಿಸುವಂತೆ ಒತ್ತಾಯಿಸಿದ್ದು, ಇಬ್ಬರು ಅಧಿಕಾರಿಗಳನ್ನು ತಕ್ಷಣ ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.
ಭಾರತೀಯ ನ್ಯಾಯಸಂಹಿತೆ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಮತ್ತು ಎಸ್ಸಿ & ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. "ಇದು ಸಾಮಾನ್ಯ ಆತ್ಮಹತ್ಯೆ ಪ್ರಕರಣವಲ್ಲ; ಪರಿಶಿಷ್ಟ ಜಾತಿಯ ಒಬ್ಬ ಪ್ರಾಮಾಣಿಕ ಅಧಿಕಾರಿಯ ಮೇಲೆ ಪ್ರಬಲ ಮೇಲಧಿಕಾರಿಗಳು ನಡೆಸಿದ ವ್ಯವಸ್ಥಿತ ಕಿರುಕುಳದ ಪರಿಣಾಮ" ಎಂದು ದೂರಿನಲ್ಲಿ ಪ್ರತಿಪಾದಿಸಿದ್ದಾರೆ.
"ನಮ್ಮಂಥ ಕುಟುಂಬಗಳು ಕೂಡಾ ಪ್ರಬಲರ ಕ್ರೌರ್ಯದಿಂದ ಛಿದ್ರಗೊಂಡಿದ್ದು, ನ್ಯಾಯ ಪಡೆಯುವುದು ಮಾತ್ರವಲ್ಲ; ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಪತಿ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಮೇಲಧಿಕಾರಿಗಳಿಂದ ಅದರಲ್ಲೂ ಮುಖ್ಯವಾಗಿ ಡಿಜಿಪಿ ಕಪೂರ್ ಅವರಿಂದ ಹಲವು ವರ್ಷಗಳ ವ್ಯವಸ್ಥಿತ ಅವಮಾನ, ಕಿರುಕುಳ ಮತ್ತು ದೌರ್ಜನ್ಯವನ್ನು ಎದುರಿಸಿದ್ದಾರೆ" ಎಂದು ಆಪಾದಿಸಿದ್ದಾರೆ. ಆದರೆ ಡಿಜಿಪಿ ಕಪೂರ್ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.







