ಹರಿಯಾಣ: ಮನೆ ಮುಂದೆಯೇ ಪೊಲೀಸ್ ಅಧಿಕಾರಿಗೆ ಥಳಿಸಿ ಹತ್ಯೆ; ಐವರು ಶಂಕಿತರ ಬಂಧನ

PC: x.com/HissarPolice
ಹಿಸ್ಸಾರ್: ಗೂಂಡಾಗಳ ಗ್ಯಾಂಗ್ ಗುರುವಾರ ತಡರಾತ್ರಿ ಹರ್ಯಾಣ ಪೊಲೀಸ್ ಅಧಿಕಾರಿಯೊಬ್ಬರ ಮನೆ ಮುಂದೆಯೇ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನೆರೆಹೊರೆಯಲ್ಲಿ ದೊಂಬಿ ಎಬ್ಬಿಸಿದ ಗೂಂಡಾಗಳನ್ನು ತಡೆಯಲು ಪ್ರಯತ್ನಿಸಿದ ಸಬ್ ಇನ್ಸ್ಪೆಕ್ಟರ್ ರಮೇಶ್ ಕುಮಾರ್ (57) ಅವರನ್ನು ಗೂಂಡಾಗಳು ಬಡಿಗೆ ಮತ್ತು ಇಟ್ಟಿಗೆಯಿಂದ ಹೊಡೆದು ಸಾಯಿಸಿದರು. ದಾಳಿಯಲ್ಲಿ ಅಧಿಕಾರಿಯ ಅಳಿಯ ಕೂಡಾ ಗಾಯಗೊಂಡಿದ್ದು, ಈ ಸಂಬಂಧ ಐದು ಮಂದಿ ಶಂಕಿತರನ್ನು ಬಂಧಿಸಲಾಗಿದೆ.
ಹಿಸ್ಸಾರ್ ವಲಯ ಎಡಿಜಿಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಕುಮಾರ್, ತಮ್ಮ ಕುಟುಂಬದೊಂದಿಗೆ ವಾಸವಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಕೆಲವರು ಮನೆಯ ಹೊರಗೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಮದ್ಯಪಾನ ಮಾಡುತ್ತಾ, ಅಶ್ಲೀಲ ಭಾಷೆಯನ್ನು ಬಳಸುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ವಸತಿ ಪ್ರದೇಶದಲ್ಲಿ ಕಿರಿಕಿರಿ ಉಂಟುಮಾಡದಂತೆ ಸಬ್ ಇನ್ಸ್ಪೆಕ್ಟರ್ ಈ ಗೂಂಡಾಗಳಲ್ಲಿ ಕೇಳಿಕೊಂಡರು. ತಕ್ಷಣ ಅಲ್ಲಿಂದ ಚದುರಿದ ಗುಂಪಿನ ಸದಸ್ಯರು 20 ನಿಮಿಷ ಬಳಿಕ ಮತ್ತಷ್ಟು ಮಂದಿಯೊಂದಿಗೆ ಆಗಮಿಸಿ ಗದ್ದಲ ಸೃಷ್ಟಿಸಿದರು. ಅವರನ್ನು ತರಾಟೆಗೆ ತೆಗೆದುಕೊಳ್ಳಲು ರಮೇಶ್ ಕುಮಾರ್ ಮನೆಯಿಂದ ಹೊರಬಂದಾಗ ಇಟ್ಟಿಗೆ ಮತ್ತು ಕಟ್ಟಡ ಪರಿಕರಗಳಿಂದ ಹೊಡೆದು ಸಾಯಿಸಿದರು. ಅಧಿಕಾರಿಯ ಅಳಿಯ ಅಮಿತ್ ಕುಮಾರ್ ಮಾವನ ರಕ್ಷಣೆಗೆ ಮುಂದಾದಾಗ ಅವರ ಮೇಲೆಯೂ ಗೂಂಡಾಗಳು ಹಲ್ಲೆ ನಡೆಸಿದರು.
ಅವರ ಚೀರಾಟ ಕೇಳಿ ಅಕ್ಕಪಕ್ಕದವರು ಹೊರಬಂದಾಗ ದಾಳಿಕೋರರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನವನ್ನು ಅಲ್ಲೇ ಬಿಟ್ಟು ಪಲಾಯನ ಮಾಡಿದರು. ಇಬ್ಬರೂ ಗಾಯಾಳುಗಳನ್ನು ತಕ್ಷಣ ಹಿಸ್ಸಾರ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರೂ, ರಮೇಶ್ ಆ ವೇಳೆಗಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು.







