ಹರ್ಯಾಣ ಗಲಭೆ: ದ್ವೇಷ ಪ್ರಚೋದಕ ಪೋಸ್ಟ್ ವಿರುದ್ಧ ಮೊದಲ ಎಫ್ಐಆರ್ ದಾಖಲು
2000 ಪೋಸ್ಟ್ ಗಳ ಪರಿಶೀಲನೆ

ಸಾಂದರ್ಭಿಕ ಚಿತ್ರ (PTI)
ಗುರ್ಗಾಂವ್: ಕಳೆದ ಸೋಮವಾರ ನೂಹ್ನಲ್ಲಿ ಆಯೋಜಿಸಲಾಗಿದ್ದ ಬೃಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಗುರಿಯಾಗಿಸಿಕೊಂಡು ಗುಂಪೊಂದು ದಾಳಿ ನಡೆಸಲು, ಅದರಿಂದ ಕೋಮು ಉದ್ವಿಗ್ನತೆ ಸೃಷ್ಟಿಯಾಗಲು ಕಾರಣವಾಗಿದ್ದ ಸಾಮಾಜಿಕ ಮಾಧ್ಯಮಗಳಲ್ಲಿನ ದ್ವೇಷ ಪ್ರಚೋದಕ ಪೋಸ್ಟ್ಗಳ ವಿರುದ್ಧ ಮೂರು ಪ್ರಕರಣ ಇದೇ ಮೊದಲ ಬಾರಿಗೆ ದಾಖಲಿಸಿಕೊಳ್ಳಲಾಗಿದೆ. ಈ ದ್ವೇಷಪ್ರಚೋಚಕ ಪೋಸ್ಟ್ಗಳಿಂದಾಗಿಯೇ ದಕ್ಷಿಣ ಹರ್ಯಾಣದಾದ್ಯಂತ ಕೋಮು ದಾಳಿಗಳು ಭುಗಿಲೆದ್ದಿದ್ದವು ಎಂದು timesofindia.indiatimes.com ವರದಿ ಮಾಡಿದೆ.
ನೂಹ್ನಲ್ಲಿ ಕೋಮು ಹಿಂಸಾಚಾರ ಭುಗಿಲೇಳುವ ಮುನ್ನ ಹಾಗೂ ಭುಗಿಲೆದ್ದ ನಂತರ ದ್ವೇಷ ಪ್ರಸರಣ ಮಾಡಿದ ಪೋಸ್ಟ್ಗಳ ವಿರುದ್ಧ ದಾಖಲಾಗಿರುವ ಮೊದಲ ಪ್ರಕರಣಗಳು ಇದಾಗಿವೆ.
ಪೊಲೀಸರು ತಮ್ಮ ಎರಡು ಪ್ರಾಥಮಿಕ ಮಾಹಿತಿ ವರದಿಗಳಲ್ಲಿ ಆರೋಪಿಗಳನ್ನು ಶಾಹಿದ್ ಮತ್ತು ಆದಿಲ್ ಖಾನ್ ಮನ್ನಕ ಅಲಿಯಾಸ್ ಬಿರ್ಜುಭಾಯಿ ಎಂದು ಗುರುತಿಸಿದ್ದು, ಮೂರನೆಯ ಪ್ರಾಥಮಿಕ ಮಾಹಿತಿ ವರದಿಯನ್ನು ‘ಶಾಯರ್ ಗುರು ಘಂಟಲ್’ ಎಂಬ ಫೇಸ್ ಬುಕ್ ಪುಟದ ವಿರುದ್ಧ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿರುವ ಸುಮಾರು 2,000 ವಿಡಿಯೊಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಗಳು ತಮ್ಮ ಪರಿಶೀಲನಾ ಕಾರ್ಯವನ್ನು ಪ್ರಾರಂಭಿಸಿವೆ. ಈ ನಡುವೆ, ಕೋಮು ಉದ್ವಿಗ್ನತೆ ಸೃಷ್ಟಿಯಾಗಲು ಕಾರಣವಾಗಿರುವ ಸಾಮಾಜಿಕ ಮಾಧ್ಯಮ ತುಣುಕುಗಳನ್ನು ಪರಿಶೀಲಿಸಲು ಹರಿಯಾಣ ಸರ್ಕಾರವು ನಾಲ್ಕು ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿಯು ವಿಶೇಷ ಕಾರ್ಯದರ್ಶಿ ಹಂತದ ಅಧಿಕಾರಿಯ ನೇತೃತ್ವವನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 31ರಂದು ಭುಗಿಲೆದ್ದ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದ್ವೇಷ ಪ್ರಚೋದಕ ಆನ್ಲೈನ್ ಪೋಸ್ಟ್ಗಳು ಉಭಯ ಸಮುದಾಯಗಳ ಸದಸ್ಯರು ನೇರ ಬೆದರಿಕೆ ಹಾಗೂ ಎಚ್ಚರಿಕೆಯನ್ನು ನೀಡಿದ ನಂತರ ಉಲ್ಬಣಗೊಂಡಿದ್ದವು ಎನ್ನಲಾಗಿದೆ. ಈ ಪೋಸ್ಟ್ಗಳನ್ನು ಆಧರಿಸಿ ಎಲ್ಲ ಪ್ರಕರಣಗಳನ್ನು ಗುರುವಾರದಂದು ದಾಖಲಿಸಿಕೊಳ್ಳಲಾಗಿದೆ.







