‘ಡಂಕಿ’ ಮಾರ್ಗವಾಗಿ ಅಮೆರಿಕಕ್ಕೆ ತೆರಳಿದ್ದ ಹರ್ಯಾಣದ 54 ಯುವಕರ ಗಡಿಪಾರು

Photo Credit : NDTV
ಚಂಡಿಗಢ, ಅ. 27: ‘ಡಂಕಿ’ ಮಾರ್ಗವಾಗಿ ಅಮೆರಿಕಕ್ಕೆ ತೆರಳಿದ್ದ ಹರ್ಯಾಣದ 54 ಯುವಕರನ್ನು ಈಗ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.
300ಕ್ಕೂ ಅಧಿಕ ಅಕ್ರಮ ವಲಸಿಗರನ್ನು ಅಮೆರಿಕದಿಂದ ಮೂರು ಸೇನಾ ವಿಮಾನಗಳಲ್ಲಿ ಗಡಿಪಾರು ಮಾಡಿದ ಸುಮಾರು 10 ತಿಂಗಳ ಬಳಿಕ ಈ ಗಡಿಪಾರು ನಡೆದಿದೆ.
ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ವಿಮಾನದಲ್ಲಿ ಬಂದಿಳಿದ 54 ಯುವಕರಲ್ಲಿ ಕರ್ನಾಲ್ ನ 16, ಕೈಥಲ್ ನ 14, ಅಂಬಾಲಾ ಹಾಗೂ ಕುರುಕ್ಷೇತ್ರದ ತಲಾ ಐವರು, ಯಮುನಾನಗರದ ನಾಲ್ವರು, ಜಿಂದ್ ನ ಮೂವರು, ಸೋನೆಪತ್ ನ ಇಬ್ಬರು, ರೋಹ್ಟಕ್, ಪಾನಿಪತ್, ಫತೇಹಾಬಾದ್ ಹಾಗೂ ಪಂಚಕುಲದ ತಲಾ ಒಬ್ಬರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುವಕರು ದಿಲ್ಲಿಗೆ ಆಗಮಿಸಿದ ಬಳಿಕ, ಆಯಾ ಜಿಲ್ಲೆಗಳ ಪೊಲೀಸ್ ತಂಡಗಳು ಅವರನ್ನು ಬಸ್ ಮೂಲಕ ಕರೆದೊಯ್ದರು. ಸೂಕ್ತ ದಾಖಲೀಕರಣ ಹಾಗೂ ಪರಿಶೀಲನೆಯ ಬಳಿಕ ಅವರನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದರು.
ಅಕ್ರಮ ವಲಸಿಗರು ಕೆಲಸ ಹುಡುಕಲು ಅಮೆರಿಕಕ್ಕೆ ಪ್ರಯಾಣಿಸಿದ್ದರು. ಆದರೆ, ಅಲ್ಲಿ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡರು ಹಾಗೂ ಅನಂತರ ಗಡಿಪಾರು ಮಾಡಿದರು.
ಗಡಿಪಾರಿಗೆ ಒಳಗಾದ ಯುವಕರು ಇದುವರೆ ಯಾವುದೇ ಏಜೆಂಟರ ವಿರುದ್ಧ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘‘ಕರ್ನಾಲ್ ನ ಓರ್ವ ಯುವಕನ ವಿರುದ್ಧ ವಿದ್ಯುತ್ ಕಳವುಗೈದ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆತ ಜಾಮೀನಿನಲ್ಲಿದ್ದಾನೆ’’ ಎಂದು ಅವರು ಹೇಳಿದ್ದಾರೆ.
ಕೈಥಾಲ್ ನ ಯುವಕರಲ್ಲಿ ಓರ್ವನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಆತ ವಿಚಾರಣೆಗೆ ಗೈರು ಹಾಜರಾಗಿದ್ದ. ಸೋನೆಪತ್ನ ಇನ್ನೋರ್ವ ಯುವಕನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.







