ಬಿಜೆಪಿಯ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಡಿ ಎಂದು ಆಮಿರ್ ಖಾನ್ ಕರೆ ನೀಡಿದ್ದಾರೆಯೆ? ಇಲ್ಲಿದೆ ವಾಸ್ತವ ಸಂಗತಿ..

ಹೊಸದಿಲ್ಲಿ: ಚುನಾವಣಾ ವರ್ಷವನ್ನು ಹಾದು ಹೋಗುತ್ತಿರುವ ಈ ಘಟ್ಟದಲ್ಲಿ ರಾಜಕೀಯ ವಿವಾದಗಳೂ ಒಂದರ ನಂತರ ಒಂದು ಭುಗಲೇಳುತ್ತಿವೆ. ಇಂತಹುದೇ ಮತ್ತೊಂದು ವಿವಾದ, ಖ್ಯಾತ ಬಾಲಿವುಡ್ ತಾರೆ ಆಮಿರ್ ಖಾನ್ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಡಿ ಎಂದು ಜನರಿಗೆ ಕರೆ ನೀಡಿದ್ದಾರೆ ಎಂಬ ವೈರಲ್ ವೀಡಿಯೊ. ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ, ಈ ವೀಡಿಯೊ ಸಂಪೂರ್ಣ ದಾರಿ ತಪ್ಪಿಸುವಂತಿದೆ ಎಂದು indiatvnews.com ವರದಿ ಮಾಡಿದೆ.
Meraj_lifeline7 ಎಂಬ ಬಳಕೆದಾರರೊಬ್ಬರು ಆಮಿರ್ ಖಾನ್ ಅವರದ್ದೆಂದು ಹೇಳಲಾದ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊವನ್ನು ಸೆಪ್ಟೆಂಬರ್ 11ರಂದು ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೊವನ್ನು ಈವರೆಗೆ 57,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ: “ಹೇ.. ಇಲ್ಲಿ ನೋಡಿ, ಇದೀಗ ಬಿಜೆಪಿ ವಿರುದ್ಧ ಆಮಿರ್ ಖಾನ್ ವೀಡಿಯೊ ಕೂಡಾ ಹೊರ ಬಂದಿದೆ. ಸೂಕ್ತ ವ್ಯಕ್ತಿಗಳ ಪರವಾಗಿ ಮತ ಚಲಾಯಿಸಿ. ನಿಮ್ಮ ಮತವು ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಣಯಿಸುತ್ತದೆ” ಎಂದು ಬರೆಯಲಾಗಿದೆ. ಈ ಪಠ್ಯದ ಹಿಂದುಗಡೆ ಆಮಿರ್ ಖಾನ್ ರನ್ನು ನೋಡಬಹುದಾಗಿದೆ ಮತ್ತು ಅವರ ಧ್ವನಿಯನ್ನು ಕೇಳಬಹುದಾಗಿದೆ.
ಈ ಕುರಿತು ಸತ್ಯ ಶೋಧನೆ ನಡೆಸಿರುವ India TV ಸುದ್ದಿ ಸಂಸ್ಥೆ, ಮೊದಲ ಆ ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದೆ. ಆ ವೀಡಿಯೊದಲ್ಲಿ ಆಮಿರ್ ಖಾನ್ ಮಾತನಾಡಿರುವುದು ದೃಢಪಟ್ಟಿದೆ. ನಂತರ ‘Aamir Khan+vote appeal’ ಎಂಬ ಕೀ ಸರ್ಚ್ ಮೂಲಕ ಗೂಗಲ್ ನಲ್ಲಿ ಹಲವಾರು ವೀಡಿಯೊಗಳನ್ನು ಪತ್ತೆ ಹಚ್ಚಲಾಗಿದೆ. ಈ ಪತ್ತೆಯ ಸಂದರ್ಭದಲ್ಲಿ ಪರಿಶೀಲಿಸಿದ ಯೂಟ್ಯೂಬ್ ವಾಹಿನಿಯಾದ ಎಡಿಆರ್ ಇಂಡಿಯಾಗೆ ಸಂಬಂಧಿಸಿದ ವೀಡಿಯೊ ಪತ್ತೆಯಾಗಿದೆ. ಈ ವೀಡಿಯೊದಲ್ಲೂ ಕೂಡಾ ಆಮಿರ್ ಖಾನ್ ವೈರಲ್ ವೀಡಿಯೊದಲ್ಲಿ ಏನು ಹೇಳಿದ್ದಾರೊ ಅದನ್ನೇ ಹೇಳಿರುವುದು ಕಂಡು ಬಂದಿದೆ. ಈ ವೀಡಿಯೊವನ್ನು ಎಪ್ರಿಲ್ 18, 2019ರಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊಗೆ ‘ಮತದಾರರಿಗೆ ಆಮಿರ್ ಖಾನ್ ಮನವಿ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. India TV ಸುದ್ದಿ ಸಂಸ್ಥೆಯ ಸತ್ಯಶೋಧನಾ ವೇದಿಕೆಯು ಈ ಒಂದು ನಿಮಿಷದ ವೀಡಿಯೊವನ್ನು ಎಚ್ಚರಿಕೆಯಿಂದ ಆಲಿಸಿದೆ. ಈ ವೀಡಿಯೊದುದ್ದಕ್ಕೂ ಆಮಿರ್ ಖಾನ್ ಬಿಜೆಪಿ ಅಥವಾ ಇನ್ಯಾವುದೇ ರಾಜಕೀಯ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿರುವುದು ಕಂಡು ಬಂದಿಲ್ಲ.
ಆಮಿರ್ ಖಾನ್ ರ ಈ ವೀಡಿಯೊವು 2019ರ ಲೋಕಸಭಾ ಚುನಾವಣಾ ಸಂದರ್ಭದ್ದು. ಮತದಾರರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮಾಹಿತಿಯನ್ನು ಹೇಗೆಲ್ಲ ಪಡೆದುಕೊಳ್ಳಬಹುದು ಎಂಬ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆಮಿರ್ ಖಾನ್ ಮಾಡಿದ್ದಾರೆ. ಒಂದು ವೇಳೆ ಮತದಾರರು ತಮ್ಮ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಪ್ರಚಾರದ ಕುರಿತು ಹೆಚ್ಚು ಮಾಹಿತಿ ಪಡೆಯಬೇಕಿದ್ದರೆ, ನಿರ್ದಿಷ್ಟ ಸಂಖ್ಯೆಯೊಂದಕ್ಕೆ ಕರೆ ಅಥವಾ ಸಂದೇಶ ರವಾನಿಸಬಹುದು ಎಂದೂ ತಿಳಿಸಿದ್ದಾರೆ. ಇಡೀ ವೀಡಿಯೊ ಉದ್ದಕ್ಕೂ ಆಮಿರ್ ಖಾನ್ ಯಾವುದೇ ರಾಜಕೀಯ ಪಕ್ಷ ಅಥವಾ ಅದರ ಅಭ್ಯರ್ಥಿಗಳ ಕುರಿತು ಪ್ರಸ್ತಾಪಿಸಿಲ್ಲ. ಈ ವೀಡಿಯೊ 2019ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಹೊಂದಿದ್ದು, ಆಮಿರ್ ಖಾನ್ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಅದರಲ್ಲಿ ಉಲ್ಲೇಖಿಸಿಲ್ಲ ಎಂಬ ಸಂಗತಿ India TV ಸುದ್ದಿ ಸಂಸ್ಥೆಯ ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಗಿದೆ.







