ಭಾರತ ಸರಕಾರವು ರೋಹಿಂಗ್ಯಾಗಳನ್ನು ನಿರಾಶ್ರಿತರೆಂದು ಘೋಷಿಸಿದೆಯೇ? ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೇ?: ಸುಪ್ರೀಂ ಕೋರ್ಟ್ ಪ್ರಶ್ನೆ

Photo credit: PTI
ಹೊಸದಿಲ್ಲಿ: ರೋಹಿಂಗ್ಯಾಗಳಿಗೆ ಸಂಬಂಧಿಸಿದ ಅರ್ಜಿಯೊಂದಕ್ಕೆ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು, ರೋಹಿಂಗ್ಯಾಗಳನ್ನು ನಿರಾಶ್ರಿತರೆಂದು ಘೋಷಿಸಿ ಭಾರತ ಸರಕಾರವು ಯಾವುದೇ ಆದೇಶವನ್ನು ಹೊರಡಿಸಿದೆಯೇ ಎಂದು ಪ್ರಶ್ನಿಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ಪೀಠವು, ರೋಹಿಂಗ್ಯಾಗಳ ಕಸ್ಟಡಿ ಕಣ್ಮರೆಗಳನ್ನು ಆರೋಪಿಸಿ ಮತ್ತು ಅವರ ಯಾವುದೇ ಗಡಿಪಾರನ್ನು ಸೂಕ್ತ ಪ್ರಕ್ರಿಯೆಯ ಮೂಲಕವೇ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ದಿಲ್ಲಿ ಪೋಲಿಸರು ಮೇ ತಿಂಗಳಿನಲ್ಲಿ ಕೆಲವು ರೋಹಿಂಗ್ಯಾಗಳನ್ನು ವಶಕ್ಕೆ ತೆಗೆದುಕೊಂಡಿದ್ದರು ಮತ್ತು ಅವರು ಎಲ್ಲಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಹಂತದಲ್ಲಿ ಸಿಜೆಐ ಸೂರ್ಯಕಾಂತ ಅವರು, ‘ರೋಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಘೋಷಿಸಿ ಸರಕಾರದ ಆದೇಶವೆಲ್ಲಿದೆ? ನಿರಾಶ್ರಿತ ಎನ್ನುವುದು ಉತ್ತಮವಾಗಿ ವ್ಯಾಖ್ಯಾನಿಸಲಾಗಿರುವ ಕಾನೂನು ಪದವಾಗಿದೆ ಮತ್ತು ಅವರನ್ನು ನಿರಾಶ್ರಿತರು ಎಂದು ಘೋಷಿಸಲು ಸರಕಾರದ ನಿಗದಿತ ಪ್ರಾಧಿಕಾರವಿದೆ. ನಿರಾಶ್ರಿತ ಎಂಬ ಕಾನೂನು ಸ್ಥಾನಮಾನವಿಲ್ಲದಿದ್ದಾಗ ಮತ್ತು ಯಾರಾದರೂ ನುಸುಳುಕೋರರಾಗಿದ್ದರೆ,ಕಾನೂನು ಬಾಹಿರವಾಗಿ ಈ ದೇಶವನ್ನು ಪ್ರವೇಶಿಸಿದ್ದರೆ ಆತನನ್ನು ಇಲ್ಲಿಯೇ ಇರಿಸಿಕೊಳ್ಳಬೇಕು ಎಂಬ ಬಾಧ್ಯತೆ ನಮಗಿದೆಯೇ?’ ಎಂದು ಪ್ರಶ್ನಿಸಿದರು.
ಅರ್ಜಿದಾರರು ರೋಹಿಂಗ್ಯಾಗಳಿಗೆ ಯಾವುದೇ ನಿರಾಶ್ರಿತ ಸ್ಥಾನಮಾನವನ್ನು ಕೋರುತ್ತಿಲ್ಲ, ಅವರ ಗಡಿಪಾರನ್ನು ವಿರೋಧಿಸುತ್ತಲೂ ಇಲ್ಲ. ಆದಾಗ್ಯೂ ಕಾನೂನಿನಿಂದ ಸ್ಥಾಪಿತ ಕಾರ್ಯವಿಧಾನಕ್ಕೆ ಅನುಗುಣವಾಗಿಯೇ ಗಡಿಪಾರನ್ನು ಮಾಡಬೇಕು ಎಂದು ಉತ್ತರಿಸಿದ ವಕೀಲರು, ‘ಈ ಪ್ರಕರಣವು ಕಸ್ಟಡಿಯಲ್ಲಿರುವಾಗ ನಾಪತ್ತೆಗೆ ಸಂಬಂಧಿಸಿದೆ. ಸರಕಾರವು ಗಡಿಪಾರಿಗಾಗಿ ಕಾರ್ಯವಿಧಾನವನ್ನು ರೂಪಿಸಿದೆ ಮತ್ತು ಅದನ್ನು ಅನುಸರಿಸಬೇಕು. ನಾವು ಅವರನ್ನು ಕಳ್ಳಸಾಗಣೆ ಮಾಡುವಂತಿಲ್ಲ,ಅದು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆ’ ಎಂದು ವಾದಿಸಿದರು.
ಇಂತಹುದೇ ಸಂಬಂಧಿತ ಅರ್ಜಿಗಳೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಸಿಜೆಐ, ‘ಅವರು ಭಾರತದಲ್ಲಿ ಉಳಿಯಲು ಕಾನೂನು ಸ್ಥಾನಮಾನವನ್ನು ಹೊಂದಿರದಾಗ ಮತ್ತು ಅವರು ನುಸುಳುಕೋರರಾಗಿದ್ದರೆ,ನಾವು ಉತ್ತರ ಭಾರತದಲ್ಲಿ ಅತಿ ಸೂಕ್ಷ್ಮವಾದ ಗಡಿಯನ್ನು ಹೊಂದಿದ್ದೇವೆ. ನುಸುಳುಕೋರನೋರ್ವ ಬಂದರೆ ನಿಮಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಹೇಳುವ ಮೂಲಕ ನಾವು ಅವರಿಗೆ ಕೆಂಪುಹಾಸಿನ ಸ್ವಾಗತವನ್ನು ನೀಡುತ್ತೇವೆಯೇ?’ ಎಂದು ಪ್ರಶ್ನಿಸಿದರು.
ಅವರನ್ನು ವಾಪಸ್ ಕಳುಹಿಸುವುದರಲ್ಲಿ ಸಮಸ್ಯೆಯೇನಿದೆ ಎಂದು ಸಿಜೆಐ ಪ್ರಶ್ನಿಸಿದರು. ಅವರನ್ನು ವಾಪಸ್ ಕಳುಹಿಸಲೇಬೇಕು, ಆದರೆ ಕಾನೂನಿಗೆ ಅನುಗುಣವಾಗಿ ಎಂದು ವಕೀಲರು ಹೇಳಿದರು.
‘ನೀವು ಮೊದಲು ಕಾನೂನುಬಾಹಿರವಾಗಿ ಗಡಿಯನ್ನು ದಾಟಿ ಒಳಪ್ರವೇಶಿಸುತ್ತೀರಿ. ನಂತರ ಇಲ್ಲಿಯ ಎಲ್ಲ ಸೌಲಭ್ಯಗಳನ್ನು ಕೇಳುತ್ತೀರಿ. ನಾವು ಕಾನೂನನ್ನು ಈ ರೀತಿ ಹಿಗ್ಗಿಸಲು ಬಯಸುತ್ತೇವೆಯೇ?’ ಎಂದು ಸಿಜೆಐ ಪ್ರಶ್ನಿಸಿದರು.
‘ನಾನು ಅದನ್ನು ಕೋರುತ್ತಿಲ್ಲ. ಅವರನ್ನು ಹಾಲಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಪ್ರಕಾರವೇ ಗಡಿಪಾರು ಮಾಡಬೇಕು ಎಂದಷ್ಟೇ ಕೋರುತ್ತಿದ್ದೇನೆ ಎಂದು ಹೇಳಿದ ವಕೀಲರು, ರೋಹಿಂಗ್ಯಾಗಳನ್ನು ಕಾರ್ಯವಿಧಾನಕ್ಕೆ ಅನುಗುಣವಾಗಿ ಗಡಿಪಾರು ಮಾಡಬೇಕು ಎಂದು 2020ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸಮೀವುಲ್ಲಾ ಪ್ರಕರಣದಲ್ಲಿ ಹೊರಡಿಸಿದ್ದ ಆದೇಶವನ್ನು ಉಲ್ಲೇಖಿಸಿದರು.
‘ನಮ್ಮಲ್ಲಿಯೂ ಬಹಳಷ್ಟು ಬಡವರಿದ್ದಾರೆ ಮತ್ತು ಅವರು ಈ ದೇಶದ ಪ್ರಜೆಗಳಾಗಿದ್ದಾರೆ, ನಾವು ಅವರ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕು’ ಎಂದು ಸಿಜೆಐ ಹೇಳಿದರು.







