ಕಾಶ್ಮೀರ ಕುರಿತು ಅಮೆರಿಕದ ಮಧ್ಯಸ್ಥಿಕೆಗೆ ಸರಕಾರ ಒಪ್ಪಿಕೊಂಡಿದೆಯೇ?: ಕಾಂಗ್ರೆಸ್ ಪ್ರಶ್ನೆ

ಸಚಿನ್ ಪೈಲಟ್ | Photo: PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ಪರವಾಗಿ ಅಮೆರಿಕ ಕದನ ವಿರಾಮವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸರಕಾರವು ಕಾಶ್ಮೀರ ಕುರಿತು ತೃತೀಯ ದೇಶದ ಮಧ್ಯಸ್ಥಿಕೆಗೆ ಒಪ್ಪಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದು ರವಿವಾರ ಆಗ್ರಹಿಸಿರುವ ಕಾಂಗ್ರೆಸ್, ಕಾಶ್ಮೀರ ವಿಷಯವನ್ನು ‘ಅಂತಾರಾಷ್ಟ್ರೀಕರಿಸುವ’ಪ್ರಯತ್ನವನ್ನು ಟೀಕಿಸಿದೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್, ಭಾರತ ಮತ್ತು ಪಾಕಿಸ್ತಾನದ ಪರವಾಗಿ ಮೊದಲ ಬಾರಿಗೆ ತೃತೀಯ ದೇಶವೊಂದು ಪ್ರಕಟನೆಯನ್ನು ನೀಡಿದ್ದರಿಂದ ‘ಕದನ ವಿರಾಮ’ ಹೇಳಿಕೆಯು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು ಎಂದು ಹೇಳಿದರು.
ಪ್ರಸ್ತುತ ಪರಿಸ್ಥಿತಿಗಳಲ್ಲಿ ಈ ವಿಷಯಗಳನ್ನು ಚರ್ಚಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಪ್ರತಿಪಕ್ಷದ ಬೇಡಿಕೆಯನ್ನು ಸರಕಾರವು ಒಪ್ಪಿಕೊಳ್ಳಬೇಕು ಎಂದರು.
ಕಳೆದ 24 ಗಂಟೆಗಳಲ್ಲಿ ಕ್ಷಿಪ್ರವಾಗಿ ಘಟನೆಗಳು ನಡೆದಿವೆ ಎಂದು ಹೇಳಿದ ಸಚಿನ್ ಪೈಲಟ್, ‘ಅಮೆರಿಕದ ಅಧ್ಯಕ್ಷರು ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಕದನವಿರಾಮವನ್ನು ಪ್ರಕಟಿಸಿದ್ದು ನಮಗೆಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ’ ಎಂದು ಹೇಳಿದರು.
ಕಾಶ್ಮೀರವು ದ್ವಿಪಕ್ಷೀಯ ವಿಷಯವಾಗಿದೆ ಮತ್ತು ಅದನ್ನು ಅಂತಾರಾಷ್ಟ್ರೀಕರಿಸಲು ಪ್ರಯತ್ನವನ್ನು ಮಾಡಲಾಗಿದೆ. ಇದು ಮೊದಲ ಬಾರಿಗೆ ಸಂಭವಿಸಿದೆ ಎಂದ ಅವರು, ಸರಕಾರವು ದೇಶವನ್ನು ಮತ್ತು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಪಷ್ಟನೆಯನ್ನು ನೀಡಬೇಕು ಎಂದು ಪ್ರತಿಪಾದಿಸಿದರು.
1994ರಲ್ಲಿ ಸಂಸತ್ತು ಪಿಒಕೆಯನ್ನು ಮರಳಿ ಪಡೆಯಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತ್ತು. ಅದನ್ನು ಪುನರಾವರ್ತಿಸುವ ಸಮಯವು ಬಂದಿದೆ. ಇಡೀ ದೇಶವು ಒಂದಾಗಿದೆ ಎಂಬ ಸಂದೇಶ ಇಡೀ ಜಗತ್ತಿಗೆ ತಲುಪಬೇಕಿದೆ. ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು ಮತ್ತು ನಿರ್ಣಯವನ್ನು ಮತ್ತೆ ಅಂಗೀಕರಿಸಬೇಕು. ತೃತಿಯ ದೇಶದ ಹಸ್ತಕ್ಷೇಪವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.







