ಪಶ್ಚಿಮ ಬಂಗಾಳದಲ್ಲಿ ತರಾತುರಿಯಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಗೆ ಅಪಾಯ: ಅಮರ್ತ್ಯ ಸೇನ್

PC : economictimes
ಕೋಲ್ಕತಾ,ಜ.24: ಪ.ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕುರಿತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಎಸ್ಐಆರ್ ಅನ್ನು ‘ಅನಗತ್ಯ ಆತುರ’ದಿಂದ ನಡೆಸಲಾಗುತ್ತಿದ್ದು,ಇದು ವಿಶೇಷವಾಗಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವಾಗ, ಪ್ರಜಾಸತ್ತಾತ್ಮಕವಾಗಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಅಪಾಯವನ್ನುಂಟು ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಬಾಸ್ಟನ್ನಿಂದ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೇನ್,ಮತದಾರರ ಪಟ್ಟಿಗಳ ಪರಿಷ್ಕರಣೆಯ ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಯಾವ ಸಂದರ್ಭಗಳಲ್ಲಿ ಅದು ಮತದಾನ ಹಕ್ಕುಗಳನ್ನು ಬಲಪಡಿಸುತ್ತದೆ ಎನ್ನುವುದರ ಕುರಿತು ಮಾತನಾಡಿದರು.
ಇಂತಹ ಪ್ರಕ್ರಿಯೆಯನ್ನು ಎಚ್ಚರಿಕೆ ಮತ್ತು ಸಾಕಷ್ಟು ಸಮಯಾವಕಾಶದೊಂದಿಗೆ ನಡೆಸುವುದು ಉತ್ತಮ ಪ್ರಜಾಪ್ರಭುತ್ವ ಕಾರ್ಯವಿಧಾನವಾಗುತ್ತದೆ. ಆದರೆ ಬಂಗಾಳದಲ್ಲಿ ಹೀಗೆ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಎಸ್ಐಆರ್ನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ. ಮತದಾರರಿಗೆ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳುವ ದಾಖಲೆಗಳ ಸಲ್ಲಿಕೆಗೆ ಸಾಕಷ್ಟು ಸಮಯಾವಕಾಶವನ್ನು ನೀಡಲಾಗುತ್ತಿಲ್ಲ. ಇದು ಮತದಾರರಿಗೆ ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದರು.
ಬಂಗಾಳದಲ್ಲಿ ಎಸ್ಐಆರ್ ಸಂದರ್ಭದಲ್ಲಿ ತನ್ನ ಅನುಭವದ ಕುರಿತು ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳಲ್ಲಿಯೂ ಕಾಲಮಿತಿಯಲ್ಲಿ ಕಾರ್ಯವನ್ನು ಪೂರ್ಣಗೊಳಿಸಬೇಕಾದ ಒತ್ತಡ ಸ್ಪಷ್ಟವಾಗಿತ್ತು. ಕೆಲವೊಮ್ಮೆ ಚುನಾವಣಾ ಆಯೋಗದ ಅಧಿಕಾರಿಗಳೇ ಸಮಯದ ಕೊರತೆಯನ್ನು ಎದುರಿಸುತ್ತಿರುವಂತೆ ಕಂಡು ಬಂದಿದೆ ಎಂದರು.
‘ಶಾಂತಿನಿಕೇತನದಲ್ಲಿಯ ನನ್ನ ತವರು ಕ್ಷೇತ್ರದಿಂದ ಮತ ಚಲಾಯಿಸುವ ನನ್ನ ಹಕ್ಕನ್ನು ಅವರು ಪ್ರಶ್ನಿಸಿದ್ದರು. ಅದೇ ಸ್ಥಳದಲ್ಲಿ ನಾನು ಹಿಂದೆ ಮತ ಚಲಾಯಿಸಿದ್ದೇನೆ ಮತ್ತು ನನ್ನ ಹೆಸರು, ವಿಳಾಸ ಮತ್ತು ಇತರ ವಿವರಗಳು ಅಧಿಕೃತ ದಾಖಲೆಗಳಲ್ಲಿ ನೋಂದಣಿಗೊಂಡಿವೆ. ನನ್ನ ಮೃತ ತಾಯಿ ಸ್ವತಃ ಮತದಾರರಾಗಿ ನನ್ನಂತೆ ಅವರ ವಿವರಗಳೂ ಅಧಿಕೃತ ದಾಖಲೆಗಳಲ್ಲಿದ್ದರೂ ಅಧಿಕಾರಿಗಳು ನನ್ನ ಜನ್ಮದಿನಾಂಕದಂದು ಅವರ ವಯಸ್ಸಿನ ಬಗ್ಗೆ ಪ್ರಶ್ನಿಸಿದ್ದರು’ ಎಂದು ಸೇನ್ ಹೇಳಿದರು.
ಮತದಾರರ ಪಟ್ಟಿಯಲ್ಲಿ ಸೇನ್ ಮತ್ತು ಅವರ ತಾಯಿ ಅಮಿತಾ ಸೇನ್ ಅವರ ನಡುವೆ ವಯಸ್ಸಿನ ಅಂತರಕ್ಕೆ ಸಂಬಂಧಿಸಿದಂತೆ ‘ತಾರ್ಕಿಕ ವ್ಯತ್ಯಾಸವನ್ನು’ ಚುನಾವಣಾ ಆಯೋಗವು ಗುರುತಿಸಿದ ಬಳಿಕ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.







