ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಲಸಿಗರಿಗೆ ನೆರವೊದಗಿಸಲು ದ್ವೇಷ ರಾಜಕೀಯ ತೊಡಕು: The Lancet ವರದಿ

ಸಾಂದರ್ಭಿಕ ಚಿತ್ರ | PC : newindianexpress.com
ಹೊಸದಿಲ್ಲಿ: ಮಾಧ್ಯಮಗಳಿಂದ ಉದ್ರೇಕಿತಗೊಂಡ ದ್ವೇಷಾಧಾರಿತ ರಾಜಕೀಯ ನಿರೂಪಣೆಗಳು ವಲಸಿಗರ ರಕ್ಷಣೆಯನ್ನು ಕಠಿಣವಾಗಿಸಿದ್ದು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಲಸಿಗರಿಗೆ ನೆರವು ಒದಗಿಸುವುದು ಸವಾಲಾಗಿ ಪರಿಣಮಿಸಿದೆ ಎಂಬ ಸಂಗತಿ 'The Lancet' ನಿಯತಕಾಲಿಕದಲಿ ಪ್ರಕಟವಾಗಿರುವ ಲೇಖನವೊಂದರಿಂದ ಬಹಿರಂಗವಾಗಿದೆ.
21ನೇ ಶತಮಾನದಲ್ಲಿ ವಲಸೆ ಮಹತ್ವದ ಸಮಸ್ಯೆಯಾಗಿಯೇ ಮುಂದುವರಿಯಲಿದ್ದು, ವಲಸಿಗರ ಸುರಕ್ಷತೆ, ಆರೋಗ್ಯ ಹಾಗೂ ಸ್ವಾಸ್ಥ್ಯ ರಕ್ಷಣೆಯನ್ನು ಮಾಡಲೇಬೇಕಿದೆ ಎಂದು ಈ ಲೇಖನದಲ್ಲಿ ಒತ್ತಿ ಹೇಳಲಾಗಿದೆ.
ಸಂಘರ್ಷದಿಂದಾಗಿ ಉದ್ಭವಿಸುವ ಬಲವಂತದ ನಿರ್ವಸತೀಕರಣ, ಹಿಂಸಾಚಾರ, ಕಿರುಕುಳ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯನ್ನು ಗಂಭೀರವಾಗಿ ಹದಗೆಡಿಸುವ ಕೃತ್ಯಗಳಲ್ಲಿ ಅಪಾಯಕಾರಿ ಪ್ರಮಾಣದ ಏರಿಕೆಯಾಗಿದೆ ಎಂದೂ ಈ ವರದಿಯಲ್ಲಿ ಎಚ್ಚರಿಸಲಾಗಿದೆ. 2024ರಲ್ಲಿ ಅಂದಾಜು 304 ದಶಲಕ್ಷ ಅಂತಾರಾಷ್ಟ್ರೀಯ ವಲಸೆ ನಡೆದಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವಾದವನ್ನು ಮತ್ತಷ್ಟು ಮುನ್ನೆಲೆಗೆ ತರುವ ಪ್ರಮುಖ ಪಾತ್ರವನ್ನು ಜಾಗತಿಕ ಆರೋಗ್ಯ ಕಾರ್ಯಕರ್ತರು ಹೊಂದಿದ್ದಾರೆ ಎಂದು ಈ ವರದಿಯಲ್ಲಿ ಒತ್ತಿ ಹೇಳಲಾಗಿದ್ದರೂ, ಹಲವಾರು ದೇಶಗಳಲ್ಲಿನ ಸಾರ್ವಜನಿಕರು ಈ ಅಂಶಗಳಿಗೆ ಸಹಮತ ವ್ಯಕ್ತಪಡಿಸಿಲ್ಲ ಎಂದೂ ಹೇಳಲಾಗಿದೆ.
"ಹಲವಾರು ಮಂದಿ ವಲಸೆ ಕುರಿತು ಮಾತನಾಡಲು ಹಿಂಜರಿಕೆ ಪ್ರದರ್ಶಿಸಿದರೂ, ಅವರೆಲ್ಲ ಸಾರಾಸಗಟಾಗಿ ವಲಸೆಯ ವಿರುದ್ಧ ಹಗೆತನ ಹೊಂದಿದ್ದಾರೆ" ಎಂದೂ ಈ ವರದಿಯಲ್ಲಿ ಹೇಳಲಾಗಿದೆ. ಒಂದು ವೇಳೆ ಆರೋಗ್ಯ ಕಾರ್ಯಕರ್ತರೇನಾದರೂ ಈ ದ್ವೇಷದ ನಿರೂಪಣೆಗಳನ್ನು ಬದಲಿಸುವ ಮಾರ್ಗವೊಂದನ್ನು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಮುಂದೆಂದೂ ಕಾರ್ಯಾಚರಣೆ ನಡೆಸದಿರುವ ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗುತ್ತದೆ" ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ.
"ದ್ವೇಷ ಮತ್ತು ವಿಭಜನೆಯನ್ನು ಅವಲಂಬಿಸಿರುವ ಹಾಗೂ ಮಾಧ್ಯಮಗಳಿಂದ ಉದ್ರೇಕಿತಗೊಂಡಿರುವ ಇಂತಹ ರಾಜಕೀಯ ನಿರೂಪಣೆಗಳು ವಲಸೆಯ ನಿರ್ಬಂಧಗಳು ಹಾಗೂ ವಲಸೆಯ ಕುರಿತು ರಕ್ಷಣಾತ್ಮಕ ಧೋರಣೆಗಳಲ್ಲಿ ಅಂತ್ಯಗೊಳ್ಳುತ್ತಿವೆ. ಇದು ನಿರಾಶ್ರಿತರು ಹಾಗೂ ವಲಸಿಗರ ಆರೋಗ್ಯಕ್ಕೆ ರಕ್ಷಣೆ ಹಾಗೂ ನೆರವು ಒದಗಿಸುವ ಪ್ರಯತ್ನಗಳಿಗೆ ಬೃಹತ್ ಸವಾಲನ್ನು ಒಡ್ಡಲಿದೆ" ಎಂದು 'The uncertain future of migrant and refugee health' ಎಂಬ ಶೀರ್ಷಿಕೆ ಹೊಂದಿರುವ ಈ ಲೇಖನವು ಕಳವಳ ವ್ಯಕ್ತಪಡಿಸಿದೆ







