ದಾಭೋಲ್ಕರ್ ಪುತ್ರನ ವಿರುದ್ಧದ ಮೊಕದ್ದಮೆಗಳನ್ನು ಗೋವಾದಿಂದ ಹೊರಗೆ ವರ್ಗಾಯಿಸಿದ ಹೈಕೋರ್ಟ್

ಬಾಂಬೆ ಉಚ್ಚ ನ್ಯಾಯಾಲಯ
ಮುಂಬೈ: ಬಾಂಬೆ ಉಚ್ಚ ನ್ಯಾಯಾಲಯವು ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಪುತ್ರ ಹಾಗೂ ಲೇಖಕ ಹಮೀದ್ ದಾಭೋಲ್ಕರ್ ಮತ್ತು ಇತರರ ವಿರುದ್ಧ ಹಿಂದುತ್ವ ಸಂಘಟನೆ ಸನಾತನ ಸಂಸ್ಥಾ ಹೂಡಿರುವ ಮಾನನಷ್ಟ ಮೊಕದ್ದಮೆಗಳನ್ನು ಗೋವಾದಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ವರ್ಗಾಯಿಸಿದೆ ಎಂದು India Today ವರದಿ ಮಾಡಿದೆ.
ತಮ್ಮ ಜೀವಕ್ಕೆ ಬೆದರಿಕೆಗಳ ಬಗ್ಗೆ ಪ್ರತಿವಾದಿಗಳ ಆತಂಕಗಳು ಸಮಂಜಸ ಮತ್ತು ನೈಜವಾಗಿವೆ ಎನ್ನುವುದನ್ನು ಗಮನಿಸಿದ ಬಳಿಕ ಉಚ್ಚ ನ್ಯಾಯಾಲಯವು ಬುಧವಾರ ಮೊಕದ್ದಮೆಗಳ ವರ್ಗಾವಣೆಗೆ ಆದೇಶ ಹೊರಡಿಸಿತು.
ದಾಭೋಲ್ಕರ್ ಮತ್ತು ಸಿಪಿಐ ನಾಯಕ ಗೋವಿಂದ ಪನ್ಸಾರೆ ಅವರ ಹತ್ಯೆಗಳಿಗೆ ತನ್ನನ್ನು ಹೊಣೆಯಾಗಿಸಿದ್ದಕ್ಕಾಗಿ ಸನಾತನ ಸಂಸ್ಥಾ 2017 ಮತ್ತು 2018ರ ನಡುವೆ ಹಮೀದ್ ದಾಭೋಲ್ಕರ್,ಪತ್ರಕರ್ತ ನಿಖಿಲ ವಾಗ್ಳೆ ಮತ್ತು ಇತರರ ವಿರುದ್ಧ ಐದು ಮಾನನಷ್ಟ ಮೊಕದ್ದಮೆಗಳನ್ನು ಹೂಡಿತ್ತು.
ವಿಚಾರವಾದಿ ಹಾಗೂ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಸ್ಥಾಪಕ ದಾಭೋಲ್ಕರ್ ಅವರನ್ನು ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಫೆ.2015ರಲ್ಲಿ ಕೊಲ್ಲಾಪುರ ನಿವಾಸಿ ಪನ್ಸಾರೆ ಬೆಳಗಿನ ವಾಯುವಿಹಾರವನ್ನು ಮುಗಿಸಿ ಮನೆಗೆ ಮರಳುತ್ತಿದ್ದಾಗ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪನ್ಸಾರೆ ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
2021ರಲ್ಲಿ ಹಮೀದ್ ದಾಭೋಲ್ಕರ್ ಮತ್ತು ವಾಗ್ಳೆ ಗೋವಾದ ಪೊಂಡಾ ನ್ಯಾಯಾಲಯದಲ್ಲಿ ಬಾಕಿಯಿರುವ ತಮ್ಮ ವಿರುದ್ಧದ ಮೊಕದ್ದಮೆಗಳನ್ನು ಮಹಾರಾಷ್ಟ್ರದ ಯಾವುದೇ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಬಾಂಬೆ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.
ಗೋವಾದಲ್ಲಿಯ ಸನಾತನ ಸಂಸ್ಥಾ ಪ್ರಧಾನ ಕಚೇರಿಗೆ ವಿಚಾರಣಾ ನ್ಯಾಯಾಲಯದ ಸಾಮೀಪ್ಯವನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಅವರು,ತಾವು ವಿಚಾರಣೆಗೆ ಹಾಜರಾದರೆ ದಾಭೋಲ್ಕರ್ ಅವರ ಗತಿಯೇ ತಮಗೂ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದರು.
ಒಟ್ಟಾರೆ ಸನ್ನಿವೇಶಗಳನ್ನು ಗಮನಿಸಿದರೆ ಅರ್ಜಿದಾರರ ಆತಂಕ ಅಸಮಂಜಸವಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಬುಧವಾರ ವಿಚಾರಣೆ ಸಂದರ್ಭ ಹೇಳಿದ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾ.ಎನ್.ಜೆ.ಜಾಮದಾರ್ ಅವರು,ನಿಜವಾದ ಪ್ರಶ್ನೆಯು ಅರ್ಜಿದಾರರಲ್ಲಿ ಅವರ ಸುರಕ್ಷತೆಯ ಬಗ್ಗೆ ಆತಂಕವನ್ನುಂಟು ಮಾಡುವ ಸಂದರ್ಭಗಳಿವೆಯೇ ಎನ್ನುವುದು ಆಗಿದೆ,ಸನಾತನ ಸಂಸ್ಥಾ ಈ ಚಟುವಟಿಕೆಗಳಲ್ಲಿ ನಿಜವಾಗಿ ಭಾಗವಹಿಸಿತ್ತೇ ಎನ್ನುವುದಲ್ಲ ಎಂದು ಬೆಟ್ಟು ಮಾಡಿದರು.
ಪ್ರಕರಣವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವುದರಿಂದ ಅದನ್ನು ಸಾಬೀತುಗೊಳಿಸಲು ಸನಾತನಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿತು.
ಅರ್ಜಿಗಳನ್ನು ವಿರೋಧಿಸಿದ ಸನಾತನ ಸಂಸ್ಥಾ ಪರ ವಕೀಲ ರಾಜೇಂದ್ರ ಪೈ ಅವರು,ಪ್ರತಿವಾದಿಗಳ ಜೀವಕ್ಕೆ ಬೆದರಿಕೆಯಿದೆ ಎಂಬ ಹೇಳಿಕೆಯು ಅಸ್ಪಷ್ಟ ಮತ್ತು ಆಧಾರರಹಿತವಾಗಿದೆ ಎಂದು ವಾದಿಸಿದ್ದರು.







