ಸಾಮಾಜಿಕ ಒತ್ತಡದಿಂದಾಗಿ ಅಂತರ್ಧರ್ಮೀಯ ದಂಪತಿಯ ಅಕ್ರಮ ಬಂಧನ: ಉತ್ತರ ಪ್ರದೇಶ ಪೋಲಿಸರನ್ನು ಪ್ರಶ್ನಿಸಿದ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಅಲಹಾಬಾದ್: ಸಾಮಾಜಿಕ ಒತ್ತಡದಿಂದಾಗಿ ಹಿಂದು-ಮುಸ್ಲಿಮ್ ದಂಪತಿಯನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಕ್ಕಾಗಿ ಶನಿವಾರ ಉತ್ತರ ಪ್ರದೇಶ ಪೋಲಿಸರನ್ನು ಪ್ರಶ್ನಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯವು, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಪೋಲಿಸರಿಗೆ ನಿರ್ದೇಶನ ನೀಡಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸಾಮಾಜಿಕ ಒತ್ತಡದ ಕಾರಣದಿಂದಾಗಿ ಅಂತರ್ಧರ್ಮೀಯ ದಂಪತಿಯನ್ನು ಬಂಧಿಸಿರುವುದು ಬಂಧನದ ಕಾನೂನುಬಾಹಿರತೆಯನ್ನು ಹೆಚ್ಚಿಸಿದೆಯಷ್ಟೇ ಎಂದು ಹೇಳಿದ ನ್ಯಾಯಮೂರ್ತಿಗಳಾದ ಸಲೀಲ್ ಕುಮಾರ ರಾಯ್ ಮತ್ತು ದಿವೇಶ ಚಂದ್ರ ಸಾಮಂತ ಅವರ ಪೀಠವು,ಅವರ ಬಂಧನಕ್ಕೆ ಕಾರಣರಾದ ಅಧಿಕಾರಿಗಳು ಇಲಾಖಾ ಕ್ರಮಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿತು.
ತನ್ನ ಪುತ್ರಿ ಅಪ್ರಾಪ್ತ ವಯಸ್ಕಳಾಗಿದ್ದು ಮುಸ್ಲಿಮ್ ವ್ಯಕ್ತಿಯೋರ್ವ ಆಕೆಯನ್ನು ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಅಲಿಗಡ ಪೋಲಿಸರು ಆತನನ್ನು ಬಂಧಿಸಿದ್ದರು.
ಆದರೆ ದಂಪತಿಯನ್ನು ನ್ಯಾಯಾಲಯದ ಮಂದೆ ಹಾಜರು ಪಡಿಸಿದಾಗ,ತಾನು ಪ್ರಾಪ್ತವಯಸ್ಕಳಾಗಿದ್ದೇನೆ ಮತ್ತು ಸ್ವಯಿಚ್ಛೆಯಿಂದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಳು.
ಬುಧವಾರ ತಾವು ಹೈಕೋರ್ಟ್ನಿಂದ ತೆರಳಿದಾಗ ಮಹಿಳೆಯ ತಂದೆ ಮತ್ತು ಇತರರು ಪೋಲಿಸರ ನೆರವಿನಿಂದ ತಮ್ಮನ್ನು ಅಪಹರಿಸಿದ್ದರು ಎಂದು ದಂಪತಿ ಆರೋಪಿಸಿದ್ದರು. ನಂತರ ಇಬ್ಬರನ್ನೂ ಅಲಿಗಡಕ್ಕೆ ಕರೆದೊಯ್ದು,ಮಹಿಳೆಯನ್ನು ಹಿಂಸೆಯನ್ನು ಎದುರಿಸುತ್ತಿರುವ ಮಹಿಳೆಯರಿಗಾಗಿರುವ ಒನ್ ಸ್ಟಾಪ್ ಸೆಂಟರ್ನಲ್ಲಿ ಇರಿಸಲಾಗಿತ್ತು ಮತ್ತು ಆಕೆಯ ಪತಿಯನ್ನು ಪೋಲಿಸ್ ಠಾಣೆಯಲ್ಲಿ ಬಂಧಿಸಲಾಗಿತ್ತು.
ಪೋಲಿಸರು ಶನಿವಾರ ದಂಪತಿಯನ್ನು ಉಚ್ಚ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು. ಮಹಿಳೆಯನ್ನು ಶುಕ್ರವಾರ ಮ್ಯಾಜಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿದ್ದು,ಅಲ್ಲಿ ಆಕೆ ಪ್ರಾಪ್ತವಯಸ್ಕೆ ಎನ್ನುವುದು ದೃಢಪಟ್ಟಿತ್ತು ಎಂದು ಸರಕಾರಿ ವಕೀಲ ಪತಂಜಲಿ ಮಿಶ್ರಾ ಅವರು ಪೀಠಕ್ಕೆ ತಿಳಿಸಿದರು.
ತಾನು ಸ್ವಂತ ಇಚ್ಛೆಯಿಂದ ಮನೆಯನ್ನು ತೊರೆದಿದ್ದೇನೆ ಮತ್ತು ಮುಸ್ಲಿಮ್ ವ್ಯಕ್ತಿಯ ಜೊತೆ ತೆರಳಲು ಬಯಸಿದ್ದೇನೆ ಎಂಬ ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟೇಟ್ ದಾಖಲಿಸಿಕೊಂಡಿದ್ದರು. ಮಹಿಳೆಯನ್ನು ನಂತರ ಬಿಡುಗಡೆ ಮಾಡಲಾಗಿತ್ತು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಶನಿವಾರ ಹೈಕೋರ್ಟ್ ದಂಪತಿಯೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿದಾಗ ಮಹಿಳೆಯು ತಾನು ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಮತ್ತು ಆತನೊಂದಿಗೆ ಇರಲು ಬಯಸಿರುವುದಾಗಿ ಪುನರುಚ್ಚರಿಸಿದ್ದಳು
ದಂಪತಿಯನ್ನು ಬಂಧಿಸಿದ್ದೇಕೆ ಎಂದು ನ್ಯಾಯಾಲಯವು ಸರಕಾರಿ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಅಂತರಧರ್ಮೀಯ ಮದುವೆಯು ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು ಎಂದು ಸರಕಾರಿ ವಕೀಲರು ಉತ್ತರಿಸಿದರು.
ಈ ವಾದವು ಸ್ವೀಕಾರಾರ್ಹವಲ್ಲ ಮತ್ತು ದಂಪತಿಯ ಬಂಧನವನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದ ಪೀಠವು,ಅವರ ಬಿಡುಗಡೆಗೆ ಆದೇಶಿಸಿತು.
ಪ್ರಜಾಪ್ರಭುತ್ವದಲ್ಲಿ ಕಾನೂನು ಜಾರಿ ವ್ಯವಸ್ಥೆಯು ನಾಗರಿಕರ ಸ್ವಾತಂತ್ರ್ಯಗಳನ್ನು ರಕ್ಷಿಸಲು ತನ್ನ ಅಧಿಕಾರವನ್ನು ಬಳಸಬೇಕು ಎಂದು ನಿರೀಕ್ಷಿಸಲಾಗಿದೆಯೇ ಹೊರತು ಒತ್ತಡಕ್ಕೆ ಮಣಿದು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಲು ಅಲ್ಲ ಎಂದು ಪೀಠವು ಹೇಳಿತು.
ನ.೨೮ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು,ಅಂದು ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯವು ಅಲಿಗಡ ಹಿರಿಯ ಎಸ್ಪಿಗೆ ಆದೇಶಿಸಿತು.







