ಯು-ಟರ್ನ್ ಹೊಡೆದ ಎಚ್.ಡಿ.ಕುಮಾರಸ್ವಾಮಿ: ಅಮೆರಿಕ ಸಂಸ್ಥೆಗೆ ಸಬ್ಸಿಡಿ ಕುರಿತು ತನ್ನ ಹೇಳಿಕೆಯ ತಪ್ಪು ಉಲ್ಲೇಖ ಎಂದು ಸಮಜಾಯಿಷಿ
ಎಚ್ ಡಿ ಕುಮಾರಸ್ವಾಮಿ | PTI
ಬೆಂಗಳೂರು,ಜೂ.೧೬: ಗುಜರಾತಿನಲ್ಲಿ ನಿರ್ಮಾಣ ಹಂತದಲ್ಲಿರುವ ಘಟಕಕ್ಕಾಗಿ ಅಮೆರಿಕದ ಸೆಮಿಕಂಡಕ್ಟರ್ ತಯಾರಿಕೆ ಸಂಸ್ಥೆ ಮೈಕ್ರಾನ್ ಟೆಕ್ನಾಲಜಿಗೆ ಸಬ್ಸಿಡಿಗಳನ್ನು ಮಂಜೂರು ಮಾಡುತ್ತಿರುವುದಕ್ಕಾಗಿ ಕೇಂದ್ರವನ್ನು ಪ್ರಶ್ನಿಸಿದ್ದ ನೂತನ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಮರುದಿನವೇ ಉಲ್ಟಾ ಹೊಡೆದಿದ್ದಾರೆ. ಸಮತೋಲಿತ ವಿಧಾನದ ಅಗತ್ಯವನ್ನು ಎತ್ತಿ ತೋರಿಸುವುದು ತನ್ನ ಹೇಳಿಕೆಗಳ ಉದ್ದೇಶವಾಗಿತ್ತು ಮತ್ತು ಅದನ್ನು ಟೀಕೆಯಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.
‘ಭಾರತಕ್ಕೆ ಸೆಮಿಕಂಡಕ್ಟರ್ ಕ್ಷೇತ್ರವನ್ನು ತರುವುದು ಮುಖ್ಯವಾಗಿದೆ, ನಮಗೆ ಅದರ ಅಗತ್ಯವಿದೆ. ಸಮಾನಾಂತರವಾಗಿ ಎರಡನೇ ಸ್ತರದ ಕ್ಷೇತ್ರ,ನಮ್ಮ ಸಣ್ಣ ಪ್ರಮಾಣದ ಉದ್ಯಮಕ್ಕಾಗಿ ಉದ್ಯೋಗಗಳನ್ನು ನಾವು ಸೃಷ್ಟಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಯೋಚಿಸುತ್ತಿದ್ದೇವೆ ಮತ್ತು ಕೆಲಸ ಮಾಡುತ್ತಿದ್ದೇವೆ. ನನ್ನ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಾನು ಯಾವುದೇ ರಾಜ್ಯವನ್ನು ಉಲ್ಲೇಖಿಸಿರಲಿಲ್ಲ. ನನ್ನ ಹೇಳಿಕೆಯನ್ನು ಈ ರೀತಿಯಲ್ಲಿ ವರದಿ ಮಾಡಿದ್ದೇಕೆ? ಭವಿಷ್ಯದಲ್ಲಿ ನಾನು ತುಂಬ ಎಚ್ಚರಿಕೆಯಿಂದ ಇರಬೇಕಿದೆ ’ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ಮೊದಲು ಹೇಳಿದ್ದೇನು?
ಜೂ.14ರಂದು ರಾಜ್ಯಕ್ಕೆ ಮರಳಿದ ಬಳಿಕ ಟಿವಿಯಲ್ಲಿ ನೇರಪ್ರಸಾರಗೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಸಬ್ಸಿಡಿಗಳ ಕುರಿತು ತನ್ನ ಕಳವಳಗಳನ್ನು ವ್ಯಕ್ತಪಡಿಸಿದ್ದರು. ಮೈಕ್ರಾನ್ ಟೆಕ್ನಾಲಜಿಯು ತಾನು ಸೃಷ್ಟಿಸುವ ಪ್ರತಿ ಉದ್ಯೋಗಕ್ಕೂ 3.2 ಕೋ.ರೂ.ಗಳ ಸಬ್ಸಿಡಿಯನ್ನು ಪಡೆಯಲಿದೆ ಎಂದು ಹೇಳಿದ್ದ ಅವರು,ದೇಶದಲ್ಲಿ ಸಾಕಷ್ಟು ಸರಕಾರಿ ನೆರವು ಲಭಿಸದ ಸಣ್ಣ ಉದ್ಯಮಗಳಿರುವಾಗ ರಾಷ್ಟ್ರೀಯ ನಿಧಿಯ ಇಷ್ಟೊಂದು ಗಣನೀಯ ಮೊತ್ತವನ್ನು ನಾವು ಅಮೆರಿಕದ ಕಂಪನಿಗೆ ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದರು. ಬೆನ್ನಿಗೇ ತನಗೆ ಇದನ್ನೆಲ್ಲ ಹೇಳುವ ಅಧಿಕಾರವಿಲ್ಲ ಎಂದು ಸಮಜಾಯಿಷಿಯನ್ನೂ ನೀಡಿದ್ದರು.
ಈಗ ಹೇಳಿದ್ದೇನು?
ಸ್ಥಳೀಯ ಸೆಮಿಕಂಡಕ್ಟರ್ ಉದ್ಯಮಕ್ಕೆ ಉತ್ತೇಜನ ನೀಡುವುದರೊಂದಿಗೆ ದೇಶಿಯ ಕಂಪನಿಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಕೇಂದ್ರ ಸರಕಾರವು ಬದ್ಧವಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ‘ಸೆಮಿಕಂಡಕ್ಟರ್ ಒಂದು ಪ್ರಮುಖ ಕ್ಷೇತ್ರವಾಗಿದೆ. ಅದು ಇಲೆಕ್ಟ್ರಾನಿಕ್ಸ್ ಮತ್ತು ಆಟೊಮೊಬೈಲ್ ತಯಾರಿಕೆಗೆ ಒಂದು ಮೂಲಭೂತ ಪೂರ್ವ ಅಗತ್ಯವಾಗಿದೆ. ಇವೆರಡೂ ಕ್ಷೇತ್ರಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿರುವ ಸೆಮಿಕಂಡಕ್ಟರ್ ಸಂಬಂಧಿತ ಉಪಕ್ರಮಗಳನ್ನು ನಾನು ಪ್ರಶಂಸಿಸುತ್ತೇನೆ ಮತ್ತು ನನ್ನ ಸಚಿವಾಲಯದ ಮೂಲಕ ಅವುಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ ’ ಎಂದು ಹೇಳಿದರು.