ರೇಮಂಡ್ ಅನ್ನು ಒಡೆಯುವ ಮೂಲಕ ನನ್ನ ಹೃದಯವನ್ನೂ ಒಡೆದಿದ್ದಾನೆ: ಗೌತಮ್ ಸಿಂಘಾನಿಯಾ ತಂದೆ ವಿಜಯ್ ಪಥ್ ಅಳಲು
ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಂಡ ರೇಮಂಡ್
Photo: NDTV
ಮುಂಬೈ:“ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ” ಎಂಬ ನಾಣ್ಣುಡಿ ಜನಸಾಮಾನ್ಯರ ನಡುವೆ ಪ್ರಚಲಿತದಲ್ಲಿದೆ. ಹಲವಾರು ದಶಕಗಳಿಂದ ಜನಮಾನಸದಲ್ಲಿ ತನ್ನದೇ ಪರಂಪರೆಯನ್ನು ಹೊಂದಿದ್ದ ರೇಮಂಡ್ ಸಂಸ್ಥೆಯ ವಿಚಾರದಲ್ಲೂ ಈ ಮಾತು ನಡೆದು ಹೋಗಿದೆ. ರೇಮಂಡ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ರೇಮಂಡ್ ಸಂಸ್ಥೆಯನ್ನೀಗ ಇಬ್ಭಾಗ ಮಾಡಿರುವ ಅವರ ಪುತ್ರನ ವಿಚಾರದಲ್ಲೂ ಈ ನಾಣ್ಣುಡಿ ಅಕ್ಷರಶಃ ಅನ್ವಯವಾಗುತ್ತದೆ. ತಮ್ಮ ಸುದೀರ್ಘ ಪ್ರಯತ್ನದ ಮೂಲಕ ರೇಮಂಡ್ ಸಂಸ್ಥೆಗೊಂದು ಪರಂಪರೆ ಹಾಗೂ ಪ್ರತಿಷ್ಠೆಯನ್ನು ತಂದುಕೊಟ್ಟಿದ್ದ ವಿಜಯ್ ಪಥ್ ರ ಹೃದಯವನ್ನು ಅವರ ಪುತ್ರ ಗೌತಮ್ ಸಿಂಘಾನಿಯಾ ತಮ್ಮ ಒಂದು ಕ್ಷಣದ ದುಡುಕಿನಿಂದ ಒಡೆದು ಚೂರು ಚೂರು ಮಾಡಿದ್ದಾರೆ. ಈ ಕುರಿತು Business Today ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ವಿಜಯ್ ಪಥ್, ತಮ್ಮ ಪುತ್ರ ರೇಮಂಡ್ ಸಂಸ್ಥೆಯನ್ನು ಒಡೆಯುವ ಮೂಲಕ ನನ್ನ ಹೃದಯವನ್ನೂ ಒಡೆದಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.
ತಮ್ಮ ಅದುಮಿಡಲಾಗದ ಭಾವನೆಗಳ ನಡುವೆಯೂ, ಗೌತಮ್ ಸಿಂಘಾನಿಯಾ ನಿರ್ಧಾರದಿಂದ ನಾನು ದೂರ ಉಳಿಯಲಿದ್ದೇನೆ ಎಂದು ವಿಜಯ್ ಪಥ್ ಸಿಂಘಾನಿಯಾ ಸ್ಪಷ್ಟಪಡಿಸಿದ್ದಾರೆ.
“ಆತ (ಗೌತಮ್ ಸಿಂಘಾನಿಯಾ) ರೇಮಂಡ್ ಅನ್ನು ಒಡೆಯುತ್ತಿದ್ದಾನೆ. ಅದು ನನ್ನ ಹೃದಯವನ್ನು ಒಡೆದಿದೆ. ಆದರೆ, ನಾನು ಮಧ್ಯಪ್ರವೇಶಿಸುವುದಿಲ್ಲ. ಆತನೇನು ಮಾಡಬೇಕೆಂದು ನಾನು ಹೇಳುವುದಿಲ್ಲ. ಆತ ಜೀವಿಸಬೇಕಿದೆ. ನಾನು ನನ್ನ ಜೀವನವನ್ನು ಕಳೆದಿದ್ದೇನೆ. ನನಗೆ ಇನ್ನು ಎರಡ್ಮೂರು ವರ್ಷ ಮಾತ್ರ ಉಳಿದಿರಬಹುದು” ಎಂದು ವಿಜಯ್ ಪಥ್ ಸಿಂಘಾನಿಯಾ ಭಾರವಾದ ಮನಸ್ಸಿನಿಂದ ಹೇಳಿದ್ದಾರೆ.
ಇತ್ತೀಚೆಗೆ ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಝ್ ಮೋದಿ ನಡುವೆ ವಿವಾಹ ವಿಚ್ಛೇದನವಾಗಿತ್ತು. ಅದಕ್ಕೆ ಪ್ರತಿಯಾಗಿ ಗೌತಮ್ ಸಿಂಘಾನಿಯಾ ಅವರು ತಮ್ಮ ಪತ್ನಿಗೆ ವಿಚ್ಛೇದನ ಪರಿಹಾರವನ್ನೂ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ವಿಜಯ್ ಪಥ್ ಸಿಂಘಾನಿಯಾ, “ನಿಮ್ಮ ಕುಟುಂಬವೇ ಇಂತಹ ಒತ್ತಡಗಳನ್ನು ಹಾದು ಹೋಗುವಾಗ ಇತರರು ಎಂತಹ ಒತ್ತಡವನ್ನು ಅನುಭವಿಸುತ್ತಿರಬಹುದು ಎಂದು ಹೇಳುವುದು ಕಷ್ಟಕರ. ನಾನು ದೇವರ ಬಳಿ ಮಾತ್ರ ಪ್ರಾರ್ಥಿಸುತ್ತೇನೆ. ಆತ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವು ನೀಡುತ್ತಾನೆ” ಎಂದು ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಇಂತಹುದು ನಮ್ಮ ಕುಟುಂಬದಲ್ಲಿ ನಡೆಯಬಹುದು ಎಂದು ನಾನೆಂದೂ ಎಣಿಸಿರಲಿಲ್ಲ” ಎಂದೂ ಅವರು ಹೇಳಿದ್ದಾರೆ.
“ಇಬ್ಬರು ಪ್ರಬುದ್ಧ ವ್ಯಕ್ತಿಗಳು ಯಾವ ಸ್ಥಿತಿಯನ್ನು ಹಾದು ಹೋಗಲಿದ್ದಾರೆ ಎಂಬುದರ ನಡುವೆ ಮಧ್ಯಪ್ರವೇಶಿಸುವುದು ನನ್ನ ಕೆಲಸವಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಝ್ ಮೋದಿ ಬೇರ್ಪಟ್ಟಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ರೇಮಂಡ್ ನ ಮಾರುಕಟ್ಟೆ ಮೌಲ್ಯವು ಸುಮಾರು ರೂ. 1,500 ಕೋಟಿಯಷ್ಟು ನಷ್ಟವಾಗಿದೆ.