ಮಾರ್ಚ್-ಜೂನ್ ಅವಧಿಯಲ್ಲಿ ದೇಶದಲ್ಲಿ 7,000ಕ್ಕೂ ಹೆಚ್ಚು ಉಷ್ಣಾಘಾತ ಪ್ರಕರಣಗಳು, 14 ಜನರು ಮೃತ್ಯು

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ,ಜು.27: ಈ ವರ್ಷದ ಮಾ.1 ಮತ್ತು ಜೂ.24ರ ನಡುವೇ ದೇಶಾದ್ಯಂತ 7,192 ಶಂಕಿತ ಉಷ್ಣಾಘಾತ ಪ್ರಕರಣಗಳು ದಾಖಲಾಗಿದ್ದು, ಅತಿಯಾದ ಬಿಸಿಲಿನ ಹೊಡೆತದಿಂದ ಕೇವಲ 14 ಸಾವುಗಳು ದೃಢಪಟ್ಟಿವೆ ಎಂದು ಸುದ್ದಿಸಂಸ್ಥೆಯು ಆರ್ ಟಿ ಐ ಕಾಯ್ದೆಯಡಿ ಪಡೆದುಕೊಂಡಿರುವ ಮಾಹಿತಿಯಿಂದ ತಿಳಿದುಬಂದಿದೆ.
2024ರಲ್ಲಿ ದೇಶದಲ್ಲಿ ಸುಮಾರು 48,000 ಉಷ್ಣಾಘಾತ ಪ್ರಕರಣಗಳು ಮತ್ತು 159 ಸಾವುಗಳು ವರದಿಯಾಗಿದ್ದು, ಇದು 1901ರ ಬಳಿಕ ಭಾರತದಲ್ಲಿ ದಾಖಲಾದ ಅತ್ಯಂತ ಹೆಚ್ಚು ತಾಪಮಾನದ ವರ್ಷವಾಗಿತ್ತು.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ಸಿಡಿಸಿ)ವು ಹಂಚಿಕೊಂಡಿರುವ ದತ್ತಾಂಶಗಳಂತೆ ಬೇಸಿಗೆಯ ಉತ್ತುಂಗದ ಮೇ ತಿಂಗಳಿನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, 2,962 ಶಂಕಿತ ಉಷ್ಣಾಘಾತ ಪ್ರಕರಣಗಳು ಮತ್ತು ಮೂರು ದೃಢೀಕೃತ ಸಾವುಗಳು ದಾಖಲಾಗಿದ್ದವು. ಎಪ್ರಿಲ್ ನಲ್ಲಿ 2,140 ಮತ್ತು ಮಾರ್ಚ್ನಲ್ಲಿ 705 ಉಷ್ಣಾಘಾತ ಪ್ರಕರಣಗಳು ಹಾಗೂ ಅನುಕ್ರಮವಾಗಿ ಆರು ಮತ್ತು ಎರಡು ಸಾವುಗಳು ದೃಢಪಟ್ಟಿದ್ದವು. ಜೂನ್ ನಲ್ಲಿ (24ರವರೆಗೆ) 1,385 ಶಂಕಿತ ಪ್ರಕರಣಗಳು ವರದಿಯಾಗಿದ್ದರೆ,ಮೂರು ಸಾವುಗಳು ದೃಢಪಟ್ಟಿದ್ದವು.
ಮಾರ್ಚ್-ಜೂನ್ ಅವಧಿಯಲ್ಲಿ ಒಟ್ಟು ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು (4,055) ಆಂಧ್ರಪ್ರದೇಶದಲ್ಲಿ ವರದಿಯಾಗಿದ್ದರೆ, ರಾಜಸ್ಥಾನ(373),ಒಡಿಶಾ(350), ತೆಲಂಗಾಣ(348) ಮತ್ತು ಮಧ್ಯಪ್ರದೇಶ(297) ನಂತರದ ಸ್ಥಾನಗಳಲ್ಲಿವೆ. ಈ ಹೆಚ್ಚಿನ ಸಂಖ್ಯೆಗಳ ಹೊರತಾಗಿಯೂ ನೂರಾರು ಶಂಕಿತ ಪ್ರಕರಣಗಳಿರುವ ಹಲವಾರು ರಾಜ್ಯಗಳು ಯಾವುದೇ ಸಾವುಗಳನ್ನು ದೃಢಪಡಿಸಿಲ್ಲ.
ಮಹಾರಾಷ್ಟ್ರ ಮತ್ತು ಉತ್ತರಾಖಂಡಗಳಲ್ಲಿ ಅತಿ ಹೆಚ್ಚು(ತಲಾ ಮೂರು) ಉಷ್ಣಾಘಾತದ ಸಾವುಗಳು ವರದಿಯಾಗಿದ್ದರೆ, ತೆಲಂಗಾಣ, ಒಡಿಶಾ, ಜಾರ್ಖಂಡ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಈ ಅಂಕಿಅಂಶಗಳು ಭಾರತದ ಕಣ್ಗಾವಲು ವ್ಯವಸ್ಥೆಯ ಮಿತಿಗಳನ್ನು ಎತ್ತಿ ತೋರಿಸಿದೆ. ತಜ್ಞರು ಹೇಳುವಂತೆ ಇವು ನಿಜವಾದ ಪ್ರಮಾಣದ ಒಂದು ಭಾಗವನ್ನಷ್ಟೇ ತೋರಿಸುತ್ತವೆ.
ಎನ್ಸಿಡಿಸಿ ದತ್ತಾಂಶಗಳನ್ನು ಸಮಗ್ರರೋಗ ಕಣ್ಗಾವಲು ಕಾರ್ಯಕ್ರಮ(ಐಡಿಎಸ್ಪಿ)ದಡಿ ಸಂಗ್ರಹಿಸಲಾಗುತ್ತದೆ ಮತ್ತು ಇದು ಪ್ರಕರಣಗಳನ್ನು ವರದಿ ಮಾಡಲು ಆಸ್ಪತ್ರೆಗಳನ್ನು ಅವಲಂಬಿಸಿದೆ. ಅಂದರೆ, ಆಸ್ಪತ್ರೆಗಳ ಹೊರಗೆ ಸಂಭವಿಸುವ ಅಥವಾ ಉಷ್ಣಾಘಾತಕ್ಕೆ ಸಂಬಂಧಿಸಿದ್ದು ಎಂದು ನಿಖರವಾಗಿ ರೋಗನಿರ್ಣಯವಾಗಿರದ ಸಾವುಗಳು ಹೆಚ್ಚಾಗಿ ಎಣಿಕೆಗೆ ಬಾರದೇ ಉಳಿದುಕೊಳ್ಳುತ್ತವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.







