ಕೇರಳದಲ್ಲಿ ಮತ್ತೆ ಭಾರೀ ಮಳೆ | ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಣೆ

ಸಾಂದರ್ಭಿಕ ಚಿತ್ರ
ತಿರುವನಂತಪುರ,ಅ.19: ಮುಂಗಾರು ಮಳೆಯ ಆರ್ಭಟದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಕೇರಳದಲ್ಲಿ ಮತ್ತೆ ಭಾರೀ ವರ್ಷಧಾರೆಯಾಗತೊಡಗಿದೆ. ಬೆಟ್ಟಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗುಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಉತ್ತರದ ಹಾಗೂ ಮಧ್ಯಕೇರಳದ ಜಿಲ್ಲೆಗಳಾದ ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್,ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆಯೆಂದು ಎಚ್ಚರಿಕೆ ನೀಡಿದ್ದು, ಅಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಕೇಂದ್ರಾಡಳಿತ ಲಕ್ಷದ್ವೀಪದಲ್ಲೂ ಹೈಆಲರ್ಟ್ ಘೋಷಿಸಲಾಗಿದೆ.
ನೆಡುಂಬಾಕಂ ಹಾಗೂ ಕುಮಿಲಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಹಾಗೂ ನೆರೆ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಕಟ್ಟಪ್ಪನದಲ್ಲಿ ನೆರೆನೀರು ವಸತಿಪ್ರದೇಶಗಳು ಹಾಗೂ ವಾಣಿಜ್ಯ ಮಳಿಗೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದ್ದು, ಅವರನ್ನು ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ವರ್ಗಾಯಿಸಲಾಗಿದೆ.
ಈ ಮಧ್ಯೆ ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ 13 ಕಿಂಡಿಗಳನ್ನು ತೆರೆಯಲಾಗಿದ್ದು, 1400 ಕ್ಯುಸೆಕ್ ನೀರನ್ನು ಬಿಡುಗಡೆಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡುಕ್ಕಿಯ ಇತರ ಅಣೆಕಟ್ಟುಗಳಲ್ಲಿಯೂ ನೀರನ್ನು ಬಿಡುಗಡೆಗೊಳಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎರ್ನಾಕುಲಂ ರೈಲ್ವೆ ಜಂಕ್ಷನ್ ಸಮೀಪದ ಪ್ರದೇಶಗಳು ಜಲಾವೃತಗೊಂಡಿವೆ. ಮಲಪ್ಪುರಂನಲ್ಲಿ ಕೃಷಿಭೂಮಿಗಳು ನೆರೆನೀರಿನಲ್ಲಿ ಮುಳುಗಿದ್ದು, ಭಾರೀ ಬೆಳೆಹಾನಿಯಾಗಿದೆ.
ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ನೀರಿನ ಅಟ್ಟ ಒಂದೇ ಸಮನೆ ಏರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಿಸಿದ್ದಾರೆ. ಪ್ರತಿಕೂಲ ಹವಾಮಾ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 22ರವರೆಗೆ ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.







