ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ: ಐಎಂಡಿ ಮುನ್ನೆಚ್ಚರಿಕೆ

PC : PTI
ತಿರುವನಂತಪುರ: ಅಲ್ಪ ವಿರಾಮದ ಬಳಿಕ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಮಂಗಳವಾರ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಶುಕ್ರವಾರ ಹಾಗೂ 9 ಜಿಲ್ಲೆಗಳಲ್ಲಿ ಶನಿವಾರ ಆರೆಂಜ್ ಅಲರ್ಟ್ ಘೋಷಿಸಿದೆ.
ಐಎಂಡಿ ರಾಜ್ಯದ 9 ಜಿಲ್ಲೆಗಳಲ್ಲಿ ಬುಧವಾರ, 8 ಜಿಲ್ಲೆಗಳಲ್ಲಿ ಗುರುವಾರ, 7 ಜಿಲ್ಲೆಗಳಲ್ಲಿ ಶುಕ್ರವಾರ ಹಾಗೂ ಐದು ಜಿಲ್ಲೆಗಳಲ್ಲಿ ಶನಿವಾರ ಯೆಲ್ಲೋ ಅಲರ್ಟ್ ಘೋಷಿಸಿದೆ.
ರಾಜ್ಯದ ಕೆಲವು ಸ್ಥಳಗಳಲ್ಲಿ ಮಂಗಳವಾರ ಹಾಗೂ ಬುಧವಾರ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಈ ಗಾಳಿ ಶನಿವಾರ ಗಂಟೆಗೆ 50ರಿಂದ 60 ಕಿ.ಮೀ. ವೇಗ ಪಡೆದುಕೊಳ್ಳಲಿದೆ ಎಂದು ಐಎಂಡಿ ತಿಳಿಸಿದೆ.
ಈ ಬಾರಿ ಮುಂಗಾರು ವಾಡಿಕೆಗಿಂತ ಮುಂಚಿತವಾಗಿ ಮೇ 24ರಂದು ರಾಜ್ಯ ಪ್ರವೇಶಿಸಿತ್ತು. ಭಾರೀ ಮಳೆ ಹಾಗೂ ಬಲವಾದ ಗಾಳಿಗೆ ರಾಜ್ಯದಾದ್ಯಂತ ಸರಕಾರಿ ಹಾಗೂ ಖಾಸಗಿ ಸೊತ್ತುಗಳಿಗೆ ವ್ಯಾಪಕ ಹಾನಿಯಾಗಿತ್ತು. ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಮರಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದವು.
ರಾಜ್ಯದ ವಿವಿಧ ಭಾಗಗಳಲ್ಲಿ ಮಾರ್ಚ್ 31ರ ವರೆಗೆ ಈ ಮುಂಗಾರು ಮಳೆ ಮುಂದುವರಿದಿತ್ತು. ಅನಂತರ ಇಳಿಕೆಯಾಗಿತ್ತು. ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.