ದೇಶದ ವಿವಿಧೆಡೆ ಭಾರೀ ಮಳೆ ಸಾಧ್ಯತೆ | ಕರಾವಳಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಗೋವಾದಲ್ಲಿ ರೆಡ್ ಆಲರ್ಟ್ ಘೋಷಣೆ

PC | PTI
ಹೊಸದಿಲ್ಲಿ: ಕೇರಳಕ್ಕೆ ಮುಂಗಾರಿನ ಆಗಮನವಾಗಿರುವಂತೆಯೇ, ದೇಶದ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು ದಕ್ಷಿಣ ಹಾಗೂ ಪಶ್ಚಿಮ ಭಾರತದ ವಿವಿಧ ರಾಜ್ಯಗಳಲ್ಲಿ ರೆಡ್ಆಲರ್ಟ್ ಘೋಷಿಸಲಾಗಿದೆ. ಮುಂದಿನ 24 ತಾಸುಗಳಲ್ಲಿ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಕರ್ನಾಟಕ, ಕೇರಳ, ತಮಿಳುನಾಡು,ಪುದುಚ್ಚೇರಿ ಹಾಗೂ ಕಾರೈಕಲ್ನ ವಿವಿಧ ಭಾಗಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ. ಗೋವಾ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿಯೂ ರೆಡ್ ಆಲರ್ಟ್ ಜಾರಿಗೊಳಿಸಲಾಗಿದೆ.
ನೈಋತ್ಯ ಮುಂಗಾರು ಮಾರುತವು ಮುಂದಿನ ಮೂರು ದಿನಗಳಲ್ಲಿ ಮುನ್ನಡೆ ಸಾಧಿಸಲಿದ್ದು, ಕರ್ನಾಟಕ , ಗೋವಾ, ಮಹಾರಾಷ್ಟ್ರದ ಕೆಲವು ಪ್ರದೇಶಗಳು, ಮಿರೆರಾಂ, ಮಣಿಪುರ ಹಾಗೂ ನಾಗಾಲ್ಯಾಂಡ್ನ ಕೆಲವು ಪ್ರದೇಶಗಳನ್ನು ಆವರಿಸಲಿದೆಯೆಂದು ಐಎಂಡಿ ಹೇಳಿದೆ.
ದಕ್ಷಿಣ ಗೋವಾದ ಪೊಂಡಾದಲ್ಲಿ ರವಿವಾರ ದಾಖಲೆಯ 162 ಮಿ.ಮೀ. ಮಳೆಯಾಗಿದೆ. ದರ್ಬಾಂದೊರಾ (124.2 ಮಿ.ಮೀ.) ಹಾಗೂ ಮಡ್ಗಾಂವ್ (123.4 ಮಿ.ಮೀ.)ನಲ್ಲಿಯೂ ಭಾರೀ ಮಳೆಯಾಗಿದೆ. ಮುಂದಿನ ಸೂಚನೆಯವರೆಗೆ ನದಿಗಳು ಹಾಗೂ ಜಲಪಾತಗಳಲ್ಲಿ ಈಜಾಡುವುದನ್ನು ಗೋವಾ ಸರಕಾರ ನಿಷೇಧಿಸಿದೆ.
ಮಹಾರಾಷ್ಟ್ರದ ರತ್ನಗಿರಿ ಹಾಗೂ ಸಿಂಧುದುರ್ಗದ ಕೆಲವೆಡೆ ಭಾರೀ ಮಳೆಯಾಗಲಿದೆ. ಸತಾರಾ ಹಾಗೂ ಕೊಲ್ಲಾಪುರದ ಘಾಟಿ ಪ್ರದೇಶಗಳಲ್ಲಿಯೂ ತೀವ್ರ ಮಳೆಯಾಗುವ ನಿರೀಕ್ಷೆಯಿದೆ. ರಾಯಗಢ, ಪುಣೆ, ಕೊಲ್ಹಾಪುರ ಹಾಗೂ ಸತಾರಗಳಲ್ಲಿ ಆರೆಂಜ್ ಆಲರ್ಟ್ ಜಾರಿಗೊಳಿಸಲಾಗಿದ್ದು, ಮುಂಬೈನಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ.







