ಕೇರಳದಲ್ಲಿ ಭಾರೀ ಮಳೆ: 5 ಜಿಲ್ಲೆಗಳಿಗೆ ಆರೇಂಜ್ ಎಚ್ಚರಿಕೆ

PC : PTI
ಹೊಸದಿಲ್ಲಿ: ಕೇರಳದ ವಿವಿಧ ಭಾಗಗಳಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದು, ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಐದು ಜಿಲ್ಲೆಗಳಿಗೆ ಆರೇಂಜ್ ಎಚ್ಚರಿಕೆಯನ್ನು ನೀಡಿದೆ. ಪತ್ತನಮ್ತಿಟ್ಟ, ಕೊಟ್ಟಾಯಮ್, ಇಡುಕ್ಕಿ, ಮಲಪ್ಪುರಮ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಈ ಎಚ್ಚರಿಕೆಯನ್ನು ಘೋಷಿಸಲಾಗಿದೆ.
11 ಸೆಂಟಿಮೀಟರ್ನಿಂದ 20 ಸೆಂಟಿಮೀಟರ್ವರೆಗಿನ ಅತ್ಯಂತ ಭಾರೀ ಮಳೆಯ ಎಚ್ಚರಿಕೆಯನ್ನು ಆರೇಂಜ್ ಅಲರ್ಟ್ ನೀಡುತ್ತದೆ.
ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿದೆ. ಇದರಿಂದಾಗಿ ರಾಜ್ಯದ ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ತಲೆದೋರಿದ್ದು, ಮನೆಗಳನ್ನು ತೊರೆದು ಹೊರಬಂದ ನೂರಾರು ಮಂದಿ ನಿರ್ವಸಿತರಾಗಿದ್ದಾರೆ. ವಯನಾಡ್ ಜಿಲ್ಲೆಯ ಬಾನಸುರ ಸಾಗರ ಮತ್ತು ಪತ್ತನಮ್ತಿಟ್ಟ ಜಿಲ್ಲೆಯ ಮೂಳಿಯರ್ ಅಣೆಕಟ್ಟು ಸೇರಿದಂತೆ ಕೆಲವು ಅಣೆಕಟ್ಟೆಗಳು ಸಂಪೂರ್ಣವಾಗಿ ತುಂಬಿರುವುದರಿಂದ ಅವುಗಳ ಬಾಗಿಲುಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.
ತ್ರಿಶೂರ್ ಜಿಲ್ಲೆಯ ಪೀಚಿ ಅಣೆಕಟ್ಟು, ಕಂಜಿರಪುಳ ಅಣೆಕಟ್ಟು, ಮಲಮ್ಪುಳ ಅಣೆಕಟ್ಟು ಮತ್ತು ಪಾಲಕ್ಕಾಡ್ ನ ಮೀನ್ ಕರ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಅಣೆಕಟ್ಟುಗಳ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅವುಗಳ ಬಾಗಿಲುಗಳನ್ನು ತೆರೆಯಲಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಜೊತೆಗೆ, ಮುಲ್ಲಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಡುಕ್ಕಿಯಲ್ಲಿರುವ ಅಣೆಕಟ್ಟಿನ ದ್ವಾರಗಳನ್ನು ತೆರೆಯಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಮುಂಜಾಗರೂಕತಾ ಕ್ರಮವಾಗಿ, ಇಡುಕ್ಕಿ ಜಿಲ್ಲಾಡಳಿತವು ಶುಕ್ರವಾರ ತಗ್ಗು ಪ್ರದೇಶಗಳಲ್ಲಿರುವ 883 ಕುಟುಂಬಗಳ 3,220 ಜನರನ್ನು ಸ್ಥಳಾಂತರಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
► ದಿಲ್ಲಿಗೆ ತಂಪು ತಂದ ಮಳೆ
ದಿಲ್ಲಿಯ ಹಲವು ಭಾಗಗಳಲ್ಲಿ ಶನಿವಾರ ಮಳೆ ಸುರಿದಿದ್ದು, ಜನರಿಗೆ ಬಿಸಿಯಿಂದ ಮುಕ್ತಿ ನೀಡಿದೆ. ಭಾರತೀಯ ಹವಾಮಾನ ಇಲಾಖೆಯು ಹಳದಿ ಎಚ್ಚರಿಕೆಯನ್ನು ಹೊರಡಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಿದೆ.
ದಿಲ್ಲಿಯ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ, ವಸಂತ್ ವಿಹಾರ, ವಸಂತ್ ಕುಂಜ್, ಹಾಝ್ ಖಾಸ್, ಮಾಳವೀಯ ನಗರ, ಕಲ್ಕಾಜಿ, ಮೆಹ್ರೋಲಿ, ತುಘ್ಲಕಾಬಾದ್, ಛತ್ತರ್ಪುರ ಮತ್ತು ನೆರೆಯ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆಯನ್ನು ಅದು ನೀಡಿದೆ.
ದಿಲ್ಲಿಯಲ್ಲಿ ಶನಿವಾರ ಕನಿಷ್ಠ ಉಷ್ಣತೆ 28.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಋತುವಿನ ಸರಾಸರಿಗಿಂತ 0.8 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.







