ಕೇರಳದಲ್ಲಿ ಭಾರೀ ಮಳೆ,ವಿವಿಧೆಡೆಗಳಲ್ಲಿ ನೆರೆ ಹಾವಳಿ
ನಾಲ್ಕು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಾಂದರ್ಭಿಕ ಚಿತ್ರ| Photo: PTI
ತಿರುವನಂತಪುರ : ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು,ರಾಜ್ಯದ ವಿವಿಧೆಡೆಗಳಲ್ಲಿ ನೆರೆಯ ಸಂಕಷ್ಟ ಎದುರಾಗಿದೆ. ನೆರೆ ಹಿನ್ನೆಲೆಯಲ್ಲಿ ಮಂಗಳವಾರ ಈ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು.
ಜಿಲ್ಲಾಡಳಿತವು ಕೊಟ್ಟಾಯಂ,ವೈಕಂ ಮತ್ತು ಚಂಗನಶ್ಶೇರಿ ತಾಲೂಕುಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಿದೆ. ಈ ಸಂಸ್ಥೆಗಳಲ್ಲಿ 17 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು ಸುಮಾರು 246 ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಇದೇ ರೀತಿ ಚೆರ್ತಲ ಮತ್ತು ಚೆಂಗನ್ನೂರ್ ತಾಲೂಕುಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿರುವ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯು ತಿರುವನಂತಪುರ,ಕೊಲ್ಲಂ, ಪಟ್ಟಣತಿಟ್ಟಂ ಮತ್ತು ಅಲಪ್ಪುಳ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಹೊರಡಿಸಿದೆ.
ಕಳೆದ 3-4 ದಿನಗಳಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವಾರು ಕಡೆಗಳಲ್ಲಿ ಮರಗಳು ಬಿದ್ದಿರುವ, ನೀರು ನಿಂತಿರುವ ಮತ್ತು ಕಂಪೌಂಡ್ ಗೋಡೆಗಳು ಬಿದ್ದಿರುವ ಘಟನೆಗಳು ವರದಿಯಾಗಿವೆ. ಆದರೆ ರಾಜ್ಯದಲ್ಲಿ ಎಲ್ಲಿಯೂ ಈವರೆಗೆ ಸಾವುನೋವುಗಳು ವರದಿಯಾಗಿಲ್ಲ.
ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರವನ್ನು ವಹಿಸುವಂತೆ ಎತ್ತರದ ಪ್ರದೇಶಗಳ ನಿವಾಸಿಗಳಿಗೆ ಸೂಚಿಸಿದೆ.







