ಮಹಾರಾಷ್ಟ್ರ | ಲಾತೂರ್ನಲ್ಲಿ ಭಾರೀ ಮಳೆ : ನೀರಿನಲ್ಲಿ ಕೊಚ್ಚಿಕೊಂಡು ಹೋದ ಐವರ ಮೃತದೇಹ ಪತ್ತೆ

PC ; PTI
ಲಾತೂರ್, ಸೆ. 20: ಮಹಾರಾಷ್ಟ್ರದ ಲಾತೂರಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಐವರ ಮೃತದೇಹ ಸರಿ ಸುಮಾರು 40 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಪತ್ತೆಯಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
27 ವರ್ಷದ ಸುದರ್ಶನ ಕೆಬ್ರಾ ಘೋನ್ಶೆಟ್ಟಿ ಅವರು ಮಂಗಳವಾರ ಬೆಳಗ್ಗೆ ಹೊಲದಿಂದ ಹಿಂದಿರುಗುತ್ತಿದ್ದಾಗ ತಿರೂರು ನದಿಯಲ್ಲಿ ಮುಳುಗಿದರು. ಅದೇ ದಿನ ಜಾಲ್ಕೋಟ್ ತಾಲೂಕಿನ ಸೇತುವೆಯ ಮೇಲೆ ಪ್ರಬಲ ಪ್ರವಾಹ ನುಗ್ಗಿದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಐವರು ಕೊಚ್ಚಿಕೊಂಡು ಹೋದರು.
ಅನಂತರ ಅವರ ಪೈಕಿ ಮೂವರನ್ನು ರಕ್ಷಿಸಲಾಯಿತು. ಇತರ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಘೋನ್ಶೆಟ್ಟಿ, ಆಟೋರಿಕ್ಷಾ ಚಾಲಕ ಸಂಗ್ರಾಮ್ ಸೋಂಕಾಂಬ್ಳೆ ಹಾಗೂ ಪ್ರಯಾಣಿಕ ವಿಠ್ಠಲ್ ಗಾಲ್ವೆ ಅವರ ಮೃತದೇಹಗಳು 40 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಗ ಗುರುವಾರ ಪತ್ತೆಯಾಗಿವೆ. ಉದ್ಗಿರಿಯ ವೈಭವ್ ಪುಂಡಲಿಕ್ ಗಾಯಕ್ವಾಡ್ (24) ಹಾಗೂ ಸಂಗೀತ ಮುರಹರಿ ಸೂರ್ಯವಂಶಿ (32) ಮೃತದೇಹ ಡೊಂಗರ್ಗಾಂವ್ ಕೆರೆಯಲ್ಲಿ ಪತ್ತೆಯಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ.
ಲಾಥೂರ್ನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಬೆಳೆ ಹಾಗೂ ಮನೆಗಳಿಗೆ ಹಾನಿ ಉಂಟಾಗಿದೆ.
ಜಿಲ್ಲೆಯಲ್ಲಿ 180 ಕೋ.ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ವಿಸ್ತೃತ ಹಾನಿ ಅಂದಾಜಿನ ಬಳಿಕ ನಿಖರ ಅಂಕಿ-ಅಂಶಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







