ಮಹಾರಾಷ್ಟ್ರ | ಮರಾಠವಾಡದಲ್ಲಿ ಭಾರೀ ಮಳೆ : ಗ್ರಾಮಗಳ ಸಂಪರ್ಕ ಕಡಿತ, ರಸ್ತೆಗಳು ಜಲಾವೃತ

PC : PTI
ಛತ್ರಪತಿ ಸಂಭಾಜಿನಗರ್, ಸೆ. 27: ಮಹಾರಾಷ್ಟ್ರದ ಮರಾಠವಾಡದ ಹಲವು ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ತಗ್ಗು ಪ್ರದೇಶಗಳ ರಸ್ತೆಗಳು ಹಾಗೂ ಸೇತುವೆಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆವರೆಗೆ, ಕಳೆದ 24 ಗಂಟೆಗಳಲ್ಲಿ ಬೀಡ್, ಲಾತೂರ್, ಧಾರಾಶಿವ್, ನಾಂದೇಡ್, ಪರ್ಭನಿ ಹಾಗೂ ಹಿಂಗೋಲಿ ಜಿಲ್ಲೆಗಳ ಹಲವು ಭಾಗಗಳಲ್ಲಿ 65 ಮಿಲಿ ಮೀಟರ್ಗೂ ಅಧಿಕ ಮಳೆ ಸುರಿದಿದೆ. ಪರ್ಭನಿ ಜಿಲ್ಲೆಯ ಗಂಗಾಖೇಡ್ನಲ್ಲಿ ಒಂದೇ ದಿನದಲ್ಲಿ ಅತ್ಯಧಿಕ 143 ಮಿಲಿ ಮೀಟರ್ ಮಳೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಗೋಲಿ ಜಿಲ್ಲೆಯ ಕಲ್ಮುರಿ ಹಾಗೂ ವಸ್ಮತ್ ತಾಲೂಕುಗಳಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಇಲ್ಲಿನ ಮೂರು ಗ್ರಾಮಗಳು ಜಲಾವೃತವಾಗಿವೆ. ವಸ್ಮತ್ ತಾಲೂಕಿನ ಛೌಂಧಿ ಬಹಿರೋಬಾ ಹಾಗೂ ಕಲಮ್ನುರಿಯ ಕೊಂಧುರು ದಿಗ್ರಾಸ್ನ ಗ್ರಾಮಗಳಲ್ಲಿ ಭಾರೀ ಮಳೆ ಸುರಿದ ಕಾರಣ ಸಂಪರ್ಕ ಕಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಯಡೀ ಮಳೆ ಸುರಿದಿರುವುದರಿಂದ ಜಿಲ್ಲೆಯ ತಗ್ಗು ಪ್ರದೇಶಗಳು, ರಸ್ತೆಗಳು ಹಾಗೂ ಸೇತುವೆಗಳು ಜಲಾವೃತವಾಗಿವೆ ಎಂದು ಲಾತೂರು ಜಿಲ್ಲಾಧಿಕಾರಿ ವರ್ಷ ಠಾಕೂರ್ ತಿಳಿಸಿದ್ದಾರೆ.
‘‘ಮುನ್ನೆಚ್ಚರಿಕಾ ಕ್ರಮವಾಗಿ ನಾವು ಜಲಾವೃತವಾದ ಸೇತುವೆ ಹಾಗೂ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದೇವೆ. ಮಂಜರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದ್ದರಿಂದ ಮಳೆ ಮುಂದುವರಿದರೆ ನದಿ ದಂಡೆಯಲ್ಲಿರುವ ಕೆಲವು ಹೊಲಗಳಿಗೆ ನೀರು ಪ್ರವೇಶಿಸುವ ಸಾಧ್ಯತೆ ಇದೆ’’ ಎಂದು ಅವರು ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಸುಸಜ್ಜಿತವಾಗಿವೆ. ಅಲ್ಲದೆ, ನೆರೆಯಲ್ಲಿ ಸಿಲುಕಿಗೊಂಡ ಗ್ರಾಮಸ್ತರನ್ನು ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಡಳಿತ ಧಾರಾಶಿವದಲ್ಲಿ ಭಾರೀ ಮಳೆಯ ನಡುವೆ ರಸ್ತೆಗಳನ್ನು ಮುಚ್ಚಿದೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಭೂಮ್ ಹಾಗೂ ಪರಂದಾ ತಾಲೂಕುಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಅನ್ನು ನಿಯೋಜಿಸಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೇಂದ್ರ ಭಾಗವಾಗಿರುವ ಮರಾಠಾವಾಡ ವಲಯ ಛತ್ರಪತಿ ಸಾಂಭಾಜಿನಗರ್, ಜಲ್ನಾ, ಲಾತೂರ್, ಪರ್ಬಾನಿ, ನಾಂದೇಡ್, ಹಿಂಗೋಲಿ, ಬೀಡ್ ಹಾಗೂ ಧಾರಾಶಿವ್ ಅನ್ನು ಒಳಗೊಂಡಿದೆ.







