ಮುಂಬೈಯಲ್ಲಿ ಭಾರೀ ಮಳೆ; ರಸ್ತೆಗಳಲ್ಲಿ ನೀರು; ರೈಲು ಸೇವೆಗಳಲ್ಲಿ ವ್ಯತ್ಯಯ

PC : PTI
ಮುಂಬೈ: ಮಹಾರಾಷ್ಟ್ರದ ಮುಂಬೈ ಮತ್ತು ಇತರ ನಗರಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತವಾಗಿದೆ.
ಮುಂಬೈಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆವರೆಗಿನ 24 ಗಂಟೆಗಳಲ್ಲಿ ಸರಾಸರಿ 95 ಮಿಲಿಮೀಟರ್ ಮಳೆಯಾಗಿದೆ. ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 58 ಮಿಲಿಮೀಟರ್ ಮತ್ತು 75 ಮಿಲಿಮೀಟರ್ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ, ಮುಂಬೈ ನಗರ ಮತ್ತು ಉಪನಗರಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂಬೈ ಸಮುದ್ರವೂ ಪ್ರಕ್ಷುಬ್ಧವಾಗಿದ್ದು 4 ಮೀಟರ್ಗೂ ಅಧಿಕ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ನೆಚ್ಚರಿಕೆ ಎಚ್ಚರಿಸಿದೆ.
ಮಧ್ಯ ಮತ್ತು ಪಶ್ಚಿಮ ರೈಲ್ವೆಯ ಉಪನಗರ ರೈಲು ಸೇವೆಗಳು ಸೋಮವಾರ ವಿಳಂಬಗೊಂಡಿವೆ. ಸೋಮವಾರ ಬೆಳಗ್ಗಿನ ನಿಬಿಡ ಅವಧಿಯಲ್ಲಿ ರೈಲುಗಳು 20ರಿಂದ 30 ನಿಮಿಷಗಳಷ್ಟು ವಿಳಂಬವಾಗಿ ಓಡಿದವು ಎಂದು ಪ್ರಯಾಣಿಕರು ಹೇಳಿದ್ದಾರೆ.
ಘಾಟ್ಕೋಪರ್-ಅಂಧೇರಿ-ವರ್ಸೋವ ಮಾರ್ಗದಲ್ಲಿ ಮುಂಬೈ ಮೆಟ್ರೋ ರೈಲು ಸೇವೆಯು ಸೋಮವಾರ ಮಧ್ಯಾಹ್ನ ಸ್ವಲ್ಪ ಕಾಲ ವ್ಯತ್ಯಯಗೊಂಡಿತ್ತು. ಆಝಾದ್ನಗರ ನಿಲ್ದಾಣದಲ್ಲಿ ಮೇಲಿನ ತಂತಿಗಳ ಮೇಲೆ ಪ್ಲಾಸ್ಟಿಕ್ ಶೀಟ್ ಬಿದ್ದಿರುವುದು ಇದಕ್ಕೆ ಕಾರಣವಾಯಿತು.
‘‘ಈಗ ರೈಲುಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರೀ ಗಾಳಿಯಿಂದಾಗಿ, ಸಮೀಪದ ಕಟ್ಟಡ ನಿರ್ಮಾಣ ಸ್ಥಳದಿಂದ ಪ್ಲಾಸ್ಟಿಕ್ ಶೀಟೊಂದು ಹಾರಿ ಬಂದು ಆಝಾದ್ನಗರ ಮೆಟ್ರೊ ಸ್ಟೇಶನ್ ಸಮೀಪದ ಓವರ್ಹೆಡ್ ವಿದ್ಯುತ್ ತಂತಿಗಳ ಮೇಲೆ ಬಿದ್ದಿತ್ತು. ಅದರಿಂದಾಗಿ ರೈಲುಗಳ ಸಂಚಾರಕ್ಕೆ ಧಕ್ಕೆಯಾಗಿತ್ತು’’ ಎಂದು ಮುಂಬೈ ಮೆಟ್ರೊ ಒನ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತಿಳಿಸಿದೆ.







