ದೆಹಲಿಯಲ್ಲಿ ವ್ಯಾಪಕ ಮಳೆ, ಸಂಚಾರ ದಟ್ಟಣೆ: 350ಕ್ಕೂ ವಿಮಾನ ವಿಳಂಬ

ನವದೆಹಲಿಯ ಏಮ್ಸ್ ಬಳಿ ಗುರುವಾರ ಸುರಿದ ಮಳೆಯಿಂದಾಗಿ ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿರುವ ಪ್ರಯಾಣಿಕರು (PTI)
ಹೊಸದಿಲ್ಲಿ: ಗುರುವಾರ ಬೆಳಿಗ್ಗೆಯಿಂದಲೇ ದೆಹಲಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ ಸಂಚಾರ ದಟ್ಟಣೆ ಸಂಭವಿಸಿದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ 350ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಿದೆ. ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಕೂಡಾ ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದೇ ಹಾರಾಟ ವಿಳಂಬವಾಗಿದೆ. ಮಳೆ ನಿಂತ ಬಳಿಕ ಕೂಡಾ ಸಂಚಾರ ದಟ್ಟಣೆಯಿಂದಾಗಿ ಹಲವರು ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದೇ, ವಿಮಾನ ತಪ್ಪಿಸಿಕೊಂಡರು.
ವಿಮಾನಯಾನಿಗಳು ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ಬರುವ ಬದಲು ಮೆಟ್ರೊ ಬಳಸುವಂತೆ ದೆಹಲಿ ವಿಮಾನ ನಿಲ್ದಾಣ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ಮೆಟ್ರೋದ ಮೆಜೆಂಟಾ ಲೈನ್, ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ ಗೆ ಸಂಪರ್ಕಿಸಿದರೆ ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಲೈನ್ (ಆರೆಂಜ್) ಟರ್ಮಿನಲ್ 3ಗೆ ಸಂಪರ್ಕ ಕಲ್ಪಿಸುತ್ತದೆ.
"ದೆಹಲಿ- ಎನ್ಸಿಆರ್ ಪ್ರದೇಶದಲ್ಲಿ ಭಾರಿ ಮಳೆ ಮತ್ತು ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆಗಳು ಸಂಚಾರ ದಟ್ಟಣೆಯಿಂದ ಕೂಡಿದ್ದವು. ಸುಗಮ ಸಂಚಾರಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಪ್ರಯಾಣಿಕರು ವಿಳಂಬವನ್ನು ತಪ್ಪಿಸಲು ಡೆಲ್ಲಿ ಮೆಟ್ರೋ ಸೇರಿದಂತೆ ಸಾರಿಗೆಯ ಪರ್ಯಾಯ ವಿಧಾನಗಳನ್ನು ಪರಿಗಣಿಸುವಂತೆ ಸಲಹೆ ಮಾಡುತ್ತಿದ್ದೇವೆ" ಎಂದು ದೆಹಲಿ ವಿಮಾನ ನಿಲ್ದಾಣ ಅಧಿಕಾರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಫ್ಲೈಟ್ ರಾಡಾರ್24 ಅಂಕಿ ಅಂಶಗಳ ಪ್ರಕಾರ ಗುರುವಾರ ಸಂಜೆ 6 ಗಂಟೆಯವರೆಗೆ 377 ವಿಮಾನಗಳು ವಿಳಂಬವಾಗಿದ್ದು, ಸರಾಸರಿ 32 ನಿಮಿಷ ವಿಳಂಬವಾಗಿದೆ.







