ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋಹನ್ ಚರಣ್ ಮಾಝಿಯ ಪರಿಚಯ ಇಲ್ಲಿದೆ...
ಮೋಹನ್ ಚರಣ್ ಮಾಝಿ | PC ; X
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಚರಣ್ ಮಾಝಿ ಕೃಷಿಕರಾಗಿ, ಆರೆಸ್ಸೆಸ್ ಶಾಲೆಯ ಶಿಕ್ಷಕರಾಗಿ, ಸರಪಂಚರಾಗಿ, ಆದಿವಾಸಿ ಹಕ್ಕುಗಳ ಹೋರಾಟಗಾರರಾಗಿ ಮತ್ತು ಗಣಿ ಮಾಫಿಯಾ ವಿರುದ್ಧದ ಚಳವಳಿಗಾರರಾಗಿ ವೈವಿಧ್ಯಮಯ ಅನುಭವಗಳನ್ನು ಹೊಂದಿದ್ದಾರೆ. ಈ ಪೂರ್ವ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸಿಎಂ ಆದ 52 ವರ್ಷ ವಯಸ್ಸಿನ ಮಾಝಿ ಕಿಯೊಂಝರ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಶಾಸಕರಾದ ಮೇಲೂ ರಾಜಧಾನಿಯಲ್ಲಿ ನನಗೆ ಬಾಡಿಗೆ ಮನೆ ಮಾಡುವ ಸಾಮರ್ಥ್ಯ ಇಲ್ಲ ಎಂದು ಹೇಳಿದವರು.
ಈ ಪೂರ್ವ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸಿಎಂ ಆದ 52 ವರ್ಷ ವಯಸ್ಸಿನ ಮಾಝಿ ಕಿಯೊಂಝರ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದೇಶದ ಮೊಟ್ಟಮೊದಲ ಆದಿವಾಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮುದಾಯವಾದ ಸಂತಾಲ ಸಮಾಜಕ್ಕೆ ಸೇರಿದ ಮಾಝಿ ಅವರನ್ನು ಬಿಜೆಪಿ ಸಿಎಂ ಹುದ್ದೆಗೆ ಆಯ್ಕೆ ಮಾಡಿದೆ.
ಆದಿವಾಸಿ ಪ್ರಾಬಲ್ಯದ ಜಾರ್ಖಂಡ್ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾರ್ಯತಂತ್ರದ ಭಾಗವಾಗಿ ಇವರನ್ನು ಬಿಜೆಪಿ ಆಯ್ಕೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಿಯೊಂಝರ್ ದಕ್ಷಿಣ ಭಾಗದಲ್ಲಿ ಹುಟ್ಟಿ ಬೆಳೆದ ಮಾಝಿ ವಿದ್ಯಾರ್ಥಿ ಜೀವನದಲ್ಲೇ ಭರವಸೆಯ ನಾಯಕರಾಗಿ ಮೂಡಿಬಂದವರು. ಆದಿವಾಸಿ ಸಮುದಾಯದ ಸಮಸ್ಯೆಗಳಿಗಾಗಿ ಹೋರಾಟ ನಡೆಸುತ್ತಾ ಬಂದ ಅವರು, ಕಾನೂನು ಪದವಿ ಪಡೆದು ರಾಜಕೀಯಕ್ಕೆ ಧುಮುಕುವ ಮುನ್ನ ಆರೆಸ್ಸೆಸ್ ನ ಸರಸ್ವತಿ ಶಿಶು ವಿದ್ಯಾ ಕೇಂದ್ರದಲ್ಲಿ ಬೋಧನೆ ಮಾಡುತ್ತಿದ್ದರು.
1997ರಿಂದ 2000ರ ವರೆಗೆ ಪಂಚಾಯತ್ ಸರಪಂಚರಾಗಿ ಕಾರ್ಯನಿರ್ವಹಿಸಿದ ಅವರು 2000ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಬಿಜೆಪಿ ಆದಿವಾಸಿ ಮೋರ್ಚಾ ಕಾರ್ಯದರ್ಶಿಯಾಗಿ ಮಾಝಿ ಅವರ ಕಾರ್ಯದಕ್ಷತೆ ಅವರನ್ನು 2019ರಲ್ಲಿ ವಿಧಾನ ಸಭೆಯಲ್ಲಿ ವಿಪಕ್ಷದ ಮುಖ್ಯ ಸಚೇತಕರನ್ನಾಗಿ ಮಾಡಿತು. 2005 ರಿಂದ 2009ರಲ್ಲಿ ಬಿಜೆಡಿ ಜತೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರು ಉಪ ಮುಖ್ಯಸಚೇತಕರಾಗಿದ್ದರು.
2019ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಸರ್ಕಾರ ಅವರಿಗೆ ಅತಿಥಿಗೃಹ ಮಂಜೂರು ಮಾಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಶಾಸಕರಾಗಿ ಹಲವು ರಾತ್ರಿಗಳನ್ನು ಫುಟ್ಪಾತ್ ನಲ್ಲಿ ಕಳೆದಿದ್ದಾಗಿ ವಿಧಾನಸಭೆಯಲ್ಲಿ ಹೇಳಿಕೆ ನೀಡುವ ಮೂಲಕ ಮಾಝಿ ಸುದ್ದಿಯಾಗಿದ್ದರು.
ಬಾಡಿಗೆ ಮನೆಯನ್ನು ಪಡೆಯುವ ಸ್ಥಿತಿಯಲ್ಲಿ ತಾವಿಲ್ಲ ಎಂದು ಸ್ಪೀಕರ್ ಎಸ್.ಎನ್.ಪಾತ್ರೊ ಅವರಿಗೆ ಮಾಝಿ ತಿಳಿಸಿದ್ದರು. ಫುಟ್ಪಾತ್ ನಲ್ಲಿ ನಿದ್ದೆ ಮಾಡುತ್ತಿದ್ದ ಸಮಯದಲ್ಲಿ ಅವರ ಮೊಬೈಲ್ ಫೋನ್ ಕಳ್ಳತನವಾಗಿತ್ತು ಎಂದೂ ಹೇಳಿದ್ದರು.
ಇದೀಗ ನಿಯೋಜಿತ ಸಿಎಂಗೆ ಹೊಸ ಬಂಗ್ಲೆ ಹುಡುಕುವ ಕಾರ್ಯದಲ್ಲಿ ಒಡಿಶಾ ಸರಕಾರದ ಆಡಳಿತ ಯಂತ್ರ ಮಗ್ನವಾಗಿದೆ. ಏಕೆಂದರೆ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರು ತಮ್ಮ ಖಾಸಗಿ ಮನೆಯಲ್ಲಿ ಕಳೆದ 24 ವರ್ಷಗಳಿಂದ ಇದ್ದಾರೆ. ಇದರಿಂದಾಗಿ ಅವರಿರುವವರೆಗೆ ಸಿಎಂಗೆ ಅಧಿಕೃತ ನಿವಾಸ ಹುಡುಕುವ ಪ್ರಮೇಯ ಬಂದಿರಲಿಲ್ಲ.
ಕಳೆದ ವರ್ಷ ಇದೇ ಮಾಝಿ ವಿಧಾನಸಭೆಯಿಂದ ಅಮಾನತಾಗಿದ್ದರು. ಒಡಿಶಾ ಸರಕಾರ ಶಾಲೆಗಳ ಬಿಸಿಯೂಟ ಯೋಜನೆಗೆ ತೊಗರಿ ಬೇಳೆ ಖರೀದಿಸುವಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿ ಮಾಝಿ ಹಾಗು ಇನ್ನೊಬ್ಬ ದಲಿತ ಶಾಸಕ ಮುಕೇಶ್ ಮಹಾಲಿಂಗ ಅವರು ಒಂದಿಷ್ಟು ಬೇಳೆಯನ್ನು ಸ್ಪೀಕರ್ ಕಡೆಗೆ ಬಿಸಾಡಿದ್ದರು. ಅದಕ್ಕೆ ಸ್ಪೀಕರ್ ಪ್ರಮೀಳಾ ಮಲಿಕ್ ಅವರಿಬ್ಬರನ್ನು ಅಮಾನತು ಮಾಡಿದ್ದರು.
2022 ರಲ್ಲಿ ಮೈನಿಂಗ್ ಮಾಫಿಯಾದಿಂದ ಕೆಲವು ಶಾಸಕರ ಜೀವಕ್ಕೆ ಅಪಾಯವಿದೆ ಎಂದು ಮಾಝಿ ಆರೋಪಿಸಿದ್ದರು. ಅದಕ್ಕೆ ಒಂದು ವರ್ಷ ಮೊದಲು ಕಿಯೊಂಝರ್ ನಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾಝಿ ಅವರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆದಿದ್ದರು. ಆ ದಾಳಿಯಲ್ಲಿ ಮಾಝಿ ಬದುಕುಳಿದಿದ್ದರು.
ಮಾಝಿ ಅವರ ಪತ್ನಿ ಪ್ರಿಯಾಂಕಾ ಮರಾಂಡಿ. ಅವರಿಗೆ ಇಬ್ಬರು ಪುತ್ರರಿದ್ದಾರೆ.