ಜನಸಂಖ್ಯಾ ಹೆಚ್ಚಳದ ಸಮಗ್ರ ಅಧ್ಯಯನಕ್ಕೆ ಉನ್ನತಾಧಿಕಾರ ಸಮಿತಿ
ಬಜೆಟ್ ಪ್ರಸ್ತಾವನೆಯ ಹಿಂದಿರುವ ಉದ್ದೇಶದ ಬಗ್ಗೆ ಪ್ರತಿಪಕ್ಷಗಳ ಸಂದೇಹ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಜನಸಂಖ್ಯಾ ಸಂರಚನೆಯಲ್ಲಿ ಉಂಟಾಗುವ ಬದಲಾವಣೆಯಿಂದ ಎದುರಾಗುವ ಸವಾಲುಗಳ ಬಗ್ಗೆ ಸಮಗ್ರವಾದ ಪರಿಶೀಲನೆ ನಡೆಸಲು ಕೇಂದ್ರ ಸರಕಾರವು ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರಪ್ರಕಟಿಸಿದ್ದಾರೆ.
ಮಧ್ಯಂತರ ಬಜೆಟ್ ಮಂಡನೆಯ ಸಂದರ್ಭದಲ್ಲಿ ‘ಸಾಮಾಜಿಕ ಬದಲಾವಣೆಗಳು’ ಎಂಬ ಶೀರ್ಷಿಕೆಯಡಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
ವಿಕಸಿತ ಭಾರತದ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಬಗೆಹರಿಸುವ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡುವ ಹೊಣೆಗಾರಿಕೆಯನ್ನು ಉನ್ನತಾಧಿಕಾರ ಸಮಿತಿಗೆ ವಹಿಸಲಾಗುವುದು ಎಂದು ಸಚಿವೆ ತಿಳಿಸಿದರು.
ಜನಸಂಖ್ಯಾ ಬೆಳವಣಿಗೆಯ ಬಗ್ಗೆ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿಯ ನೇಮಿಸುವ ಕೇಂದ್ರ ಸರಕಾರದ ಪ್ರಸ್ತಾವನೆಯ ಹಿಂದಿರುವ ಉದ್ದೇಶದ ಬಗ್ಗೆ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ತೀವ್ರ ಸಂದೇಹ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ನಿಂದನೆಯೇ ಆರೆಸ್ಸೆಸ್-ಬಿಜೆಪಿಯ ಅಚ್ಚುಮೆಚ್ಚಿನ ವಿಷಯವಾಗಿದೆ. ಜನಸಂಖ್ಯಾ ಬೆಳವಣಿಗೆಯ ಅಧ್ಯಯನಕ್ಕೆ ಉನ್ನತಾಧಿಕಾರ ಸಮಿತಿಯನ್ನು ರಚಿಸುವ ಕೇಂದ್ರದ ಉದ್ದೇಶ ಸಂಶಯಾಸ್ಪದವಾಗಿದೆ ಎಂದವರು ಹೇಳಿದ್ದಾರೆ.
‘‘ ಈ ನಡೆಯು ಮುಸ್ಲಿಂ ಸಮುದಾಯದ ವರ್ಚಸ್ಸಿಗೆ ಕಳಂಕವುಂಟು ಮಾಡುವ ಪ್ರಯತ್ನವೆಂಬಂತೆ ತೋರುತ್ತದೆ. ಶಿಕ್ಷಣ ಸೇರಿದಂತೆ ಮೂಲಭೂತ ಅವಶ್ಯಕತೆಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಖಂಡಿತವಾಗಿಯೂ ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಬಹುದಾಗಿದೆ. ಆದರೆ ಕೇಂದ್ರ ಸರಕಾರವು ಬೇರೇನೋ ಉದ್ದೇಶವಿಟ್ಟುಕೊಂಡು ಕೆಲಸ ಮಾಡುತ್ತಿದೆ ’’ ಎಂದವರು ಹೇಳಿದು.
ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು ಕುಸಿದಿರುವ ಹೊರತಾಗಿಯೂ ಜನಸಂಖ್ಯಾ ಬೆಳವಣಿಗೆ ಮುಸ್ಲಿಮರು ಕಾರಣವೆಂಬುದಾಗಿ ಆರೆಸ್ಸೆಸ್ ಹಾಗೂ ಬಿಜೆಪಿ ಹಾಗೂ ಸಂಘಪರಿವಾರದ ಇತರ ಸಂಘಟನೆಗಳು ಆರೋಪಿಸುತ್ತಿವೆ. ಜನಸಂಖ್ಯಾ ಬೆಳವಣಿಗೆಯ ವಿಷಯವನ್ನು ಪ್ರಸ್ತಾವಿಸುವ ಬಿಜೆಪಿಯ ಪ್ರಯತ್ನದ ಬಗ್ಗೆ ಪ್ರತಿಪಕ್ಷಗಳು ಸದಾ ಸಂದೇಹವನ್ನು ತಾಳುತ್ತಲೇ ಬಂದಿವೆ ಬ್ರಿಟ್ಟಾಸ್ ತಿಳಿಸಿದರು.







