ಸೇನೆಯಲ್ಲಿ ದೀರ್ಘಾವಧಿ ಸೇವೆಯ ವೇಳೆ ಅನುಭವಿಸುವ ಒತ್ತಡ ಕಾಯಿಲೆಗೆ ಕಾರಣವಾಗಬಹುದು : ಹೈಕೋರ್ಟ್

ಸಾಂದರ್ಭಿಕ ಚಿತ್ರ
ಚಂಡೀಗಢ, ಅ. 5: ಸೇನೆಯ ದೀರ್ಘಾವಧಿ ಸೇವೆಯ ವೇಳೆ ಅನುಭವಿಸುವ ಒತ್ತಡ ಮತ್ತು ದಣಿವು ಕಾಯಿಲೆಗೆ ಕಾರಣವಾಗಬಹುದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೇಳಿದೆ ಮತ್ತು ಕ್ಯಾನ್ಸರ್ನಿಂದಾಗಿ ನಿಧನ ಹೊಂದಿದ ಸೇನಾ ಸಿಬ್ಬಂದಿಯೊಬ್ಬರಿಗೆ ವಿಶೇಷ ಕುಟುಂಬ ಪಿಂಚಣಿ ನೀಡುವುದನ್ನು ವಿರೋಧಿಸಿ ಕೇಂದ್ರ ಸರಕಾರ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದೆ.
ಅದೇ ವೇಳೆ, ಹೊಗೆಬತ್ತಿ ಸೇವನೆಯಿಂದ ಬರುವ ಕ್ಯಾನ್ಸರ್ ಹೊರತುಪಡಿಸಿ, ಉಳಿದ ಎಲ್ಲಾ ಕ್ಯಾನ್ಸರ್ಗಳಿಗೆ ಸೇನಾ ಸೇವೆ ಕಾರಣ ಎಂದು ಹೇಳಬಹುದು ಎಂದು ಹೇಳುವ ಅರ್ಜಿದಾರ ಕೇಂದ್ರ ಸರಕಾರದ ನಿಯಮಗಳನ್ನೂ ನ್ಯಾಯಾಲಯ ಉಲ್ಲೇಖಿಸಿತು.
ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ 2019ರ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಹರ್ಸಿಮ್ರಾನ್ ಸಿಂಗ್ ಸೇತಿ ಮತ್ತು ವಿಕಾಸ್ ಸೂರಿ ಅವರನ್ನು ಒಳಗೊಂಡ ವಿಭಾಗ ಪೀಠವೊಂದು ತಳ್ಳಿಹಾಕಿತು.
ಕುಮಾರಿ ಸಲೋಚನ ವರ್ಮಾರಿಗೆ ಅವರ ಮಗ ಮೃತಪಟ್ಟ ದಿನದಿಂದ ವಿಶೇಷ ಕುಟುಂಬ ಪಿಂಚಣಿಯನ್ನು ನೀಡಬೇಕು ಎಂಬುದಾಗಿ ನ್ಯಾಯಮಂಡಳಿಯು ಆದೇಶಿಸಿತ್ತು. ಅವರ ಮಗ 2009 ಜೂನ್ 24ರಂದು ಮೃತಪಟ್ಟಿದ್ದಾರೆ.
‘‘ಒಂದನೇ ಪ್ರತಿವಾದಿಯ ಮಗನು ಆರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಮತ್ತು ಇದರಿಂದಾಗಿ ಅವರು ಒತ್ತಡಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಸುದೀರ್ಘ ಅವಧಿಯಲ್ಲಿ ಅನುಭವಿಸಿದ ಒತ್ತಡ ಮತ್ತು ದಣಿವು ಕ್ಯಾನ್ಸರ್ಗೆ ಕಾರಣವಾಗಿದೆ ಎನ್ನುವುದನ್ನು ನಿಸ್ಸಂಧಿಗ್ಧವಾಗಿ ಹೇಳಬಹುದಾಗಿದೆ’’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.







