‘ಹುತಾತ್ಮ ಅಗ್ನಿವೀರರ ಕುಟುಂಬಗಳಿಗೂ ಸಮಾನ ಸವಲತ್ತು ನೀಡಿ’: ಮೃತ ಯೋಧನ ತಾಯಿಯಿಂದ ಹೈಕೋರ್ಟ್ ಗೆ ಮನವಿ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ನ.27: ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಯೋಧರು ಕರ್ತವ್ಯದ ವೇಳೆ ಸಾವನ್ನಪ್ಪಿದಲ್ಲಿ ಅವರ ಕುಟುಂಬಗಳಿಗೆ ನೀಡಲಾಗುವ ಸವಲತ್ತುಗಳಲ್ಲಿ ನಿಯಮಿತ ಯೋಧರಷ್ಟೇ ಸಮಾನತೆಯಿರಬೇಕೆಂದು ಕೋರಿ ಸೇನಾ ಕಾರ್ಯಾಚರಣೆಯೊಂದರಲ್ಲಿ ಮಡಿದ ಅಗ್ನಿವೀರ ಯೋಧನೊಬ್ಬನ ತಾಯಿಯು ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದಾರೆ.
ದೀರ್ಘಾವಧಿಯ ಸೇವೆಗೆ ನೇಮಕಗೊಂಡ ಯೋಧರ ಕುಟುಂಬಗಳಿಗೆ ವಾಡಿಕೆಯಂತೆ ನೀಡಲಾಗುವ ದೀರ್ಘಾವಧಿಯ ಪಿಂಚಣಿ ಮತ್ತಿತರ ಕಲ್ಯಾಣ ಸೌಲಭ್ಯಗಳನ್ನು ಅಗ್ನಿವೀರ ಯೋಧರಿಗೆ ನಿರಾಕರಿಸುವುದು ತಾರತಮ್ಯದ್ದಾಗಿದೆ ಎಂದು ಜ್ಯೋತಿಬಾಯಿ ಶ್ರೀರಾಮ ನಾಯ್ಕ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಜ್ಯೋತಿಬಾಯಿ ಅವರ ಪುತ್ರ, 851 ಲಘು ಪದಾತಿದಳದ ಅಗ್ನಿವೀರ ಎಂ. ಮುರಳಿನಾಯ್ಕ್ ಅವರು ಈ ವರ್ಷದ ಮೇ 9ರಂದು ಜಮ್ಮುಕಾಶ್ಮೀರದ ಪೂಂಛ್ ನಲ್ಲಿ ಗಡಿಯಾಚೆಯಿಂದ ನಡೆದ ಶೆಲ್ದಾಳಿಯಲ್ಲಿ ಸಾವನ್ನಪ್ಪಿದ್ದರು., ಅಗ್ನಿವೀರ್ ಯೋಧನೊಬ್ಬ ಯುದ್ಧರಂಗದಲ್ಲಿ ಮಡಿದ ಮೊತ್ತಮೊದಲ ಪ್ರಕರಣ ಇದಾಗಿದೆ ಎಂದು ಜ್ಯೋತಿಬಾಯಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸಂವಿಧಾನದ 226ನೇ ಕಲಮಿನಡಿ ಸಲ್ಲಿಸಿದ ಈ ಅರ್ಜಿಯಲ್ಲಿ ಅಗ್ನಿಪಥ ಯೋಜನೆಯನ್ನು ರದ್ದುಪಡಿಸುವಂತೆ ಕೋರಲಾಗಿಲ್ಲ. ಆದರೆ ಸೇನಾ ಕಾರ್ಯಾಚರಣೆಗಳಲ್ಲಿ ಮಡಿದ ಅಗ್ನಿವೀರ ಯೋಧನ ಕುಟುಂಬಗಳನ್ನು ಜೀವನಪರ್ಯಂತ ಆರ್ಥಿಕ ಭದ್ರತೆಯನ್ನು ಒದಗಿಸುವುದರಿಂದ ಹೊರಗಿಟ್ಟಿರುವುದನ್ನು ಅದು ಪ್ರಶ್ನಿಸಿದೆ. ಮೃತ ಅಗ್ನಿವೀರರ ಕುಟುಂಬಗಳಿಗೆ ಸೌಲಭ್ಯಗಳನ್ನು ನಿರಾಕರಿಸುವುದು ಸಂವಿಧಾನದ 14 ಹಾಗೂ 21 ಕಲಮುಗಳ ಉಲ್ಲಂಘನೆಯಾಗಿದೆ ಎಂದವರು ಪ್ರತಿಪಾದಿಸಿದ್ದಾರೆ. ಸಮಾನವಾದ ಕರ್ತವ್ಯಗಳನ್ನು ನಿರ್ವಹಿಸುವ ಹಾಗೂ ಸಮಾನವಾದ ಅಪಾಯಗಳನ್ನು ಎದುರಿಸುವ ಎರಡು ಶ್ರೇಣಿಗಳ ಯೋಧರ ನಡುವೆ ಏಕಪಕ್ಷೀಯವಾಗಿ ಸೌಲಭ್ಯಗಳನ್ನು ನಿರಾಕರಿಸುವುದು ಸಂವಿಧಾನದ 14 ಹಾಗೂ 21ನೇ ಕಲಮಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ನನ್ನ ಪುತ್ರನು ಒಂದೇ ರೀತಿಯ (ನಿಯಮಿತ ಯೋಧರಂತೆ) ಸಮವಸ್ತ್ರ ಧರಿಸಿದ್ದನು, ಒಂದೇ ರೀತಿಯ ಪ್ರಮಾಣವಚನ ಸ್ವೀಕರಿಸಿದ್ದನು ಹಾಗೂ ಯಾವುದೇ ನಿಯಮಿತ ಸೈನಿಕನು ಎದುರಿಸುವಂತಹ ಅಪಾಯಗಳನ್ನು ಕೂಡಾ ಎದುರಿಸಿದ್ದನು. ಹೀಗಿದ್ದರೂ ಅಗ್ನಿಪಥ ಯೋಜನೆಯ ನಿಬಂಧನೆಗಳಿಂದಾಗಿ, ಆತನ ಮಹೋನ್ನತ ಬಲಿದಾನಕ್ಕೆ ಓರ್ವ ಹುತಾತ್ಮ ಯೋಧನಿಗೆ ಸಿಗಬೇಕಾದ ಘನತೆ,ಗೌರವದ ಮನ್ನಣೆಯನ್ನು ನೀಡಲಾಗಿಲ್ಲ ಎಂದು ಜ್ಯೋತಿ ನಾಯ್ಕ್ ಅರ್ಜಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುತಾತ್ಮರಾದ ಅಗ್ನಿವೀರ ಯೋಧರ ಕುಟುಂಬಗಳಿಗೆ ಕೌಟುಂಬಿಕ ಪಿಂಚಣಿ, ಸೇವಾಭತ್ತೆ, ಮಾಜಿ ಸೇನಾ ಯೋಧರ ಸ್ಥಾನಮಾನ, ಆರೋಗ್ಯಪಾಲನಾ ಸೌಲಭ್ಯಗಳು ಹಾಗೂ ಸಾಂಸ್ಥಿಕೆ ಮಾನ್ಯತೆಯನ್ನು ನೀಡುವ ಕುರಿತು ಸಂಬಂಧಿತ ಇಲಾಖೆಗಳಿಗೆ ನಿರ್ದೇಶನಗಳನ್ನುನೀಡುವಂತೆ ಅರ್ಜಿದಾರರು ಕೋರಿದ್ದಾರೆ.







