Indore ಸಾವುಗಳ ತನಿಖೆಗೆ ಆಯೋಗ ನೇಮಿಸಿದ ಹೈಕೋರ್ಟ್

ಮಧ್ಯಪ್ರದೇಶ ಹೈಕೋರ್ಟ್ | Photo Credit : PTI
ಇಂದೋರ್, ಜ. 28: ಇಂದೋರ್ ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ ಜನರು ಮೃತಪಟ್ಟಿರುವ ಘಟನೆಯ ಕುರಿತು ತನಿಖೆ ನಡೆಸಲು ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ಏಕ ಸದಸ್ಯ ಆಯೋಗವೊಂದನ್ನು ನೇಮಿಸಿದೆ. ಹೈಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಸುಶೀಲ್ ಕುಮಾರ್ ಗುಪ್ತರನ್ನು ಈ ಆಯೋಗದ ಮುಖ್ಯಸ್ಥರಾಗಿ ನ್ಯಾಯಾಲಯ ನೇಮಿಸಿದೆ.
ಭಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಸುಮಾರು 30 ಮಂದಿ ಮೃತಪಟ್ಟಿದ್ದು, 1,400ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಅಲ್ಲಿನ ನೀರನ್ನು ಪ್ರತಿದಿನ ಪರೀಕ್ಷಿಸಬೇಕು ಹಾಗೂ ಸಂತ್ರಸ್ತ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಬೇಕು ಎಂದು ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಭಗೀರಥಪುರದಲ್ಲಿ 23 ಸಾವುಗಳು ವರದಿಯಾಗಿವೆ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ, ಈ ಪೈಕಿ ಕಲುಷಿತ ನೀರು ಸೇವನೆಯಿಂದ ಸಂಭವಿಸಿದ ಸಾವುಗಳ ಸಂಖ್ಯೆ 16 ಮಾತ್ರ ಎಂದು ಅದು ಹೇಳಿದೆ.
ಆದರೆ, ಕಲುಷಿತ ನೀರು ಸೇವನೆಯಿಂದ ಸುಮಾರು 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.





